ಸೂರ್ಯದೇವರ 6ನೇ ವರ್ಷದ ಜಾತ್ರಾ ಮಹೋತ್ಸವ

| Published : Feb 07 2025, 12:30 AM IST

ಸಾರಾಂಶ

ಇತಿಹಾಸದ ಪುಟಗಳಲ್ಲಿ ಚನ್ನಮ್ಮಾಜಿಯ ಕಿತ್ತೂರು ಇರುವವರೆಗೂ ಈ ಸೂರ್ಯ ದೇವಸ್ಥಾನದ ಹಾಗೂ ಇದರ ಧರ್ಮದರ್ಶಿಗಳಾದ ಸುರೇಶ ಕಲಾಲ ಹೆಸರು ಅಜರಾಮರವಾಗಿರುತ್ತದೆ ಎಂದು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಇತಿಹಾಸದ ಪುಟಗಳಲ್ಲಿ ಚನ್ನಮ್ಮಾಜಿಯ ಕಿತ್ತೂರು ಇರುವವರೆಗೂ ಈ ಸೂರ್ಯ ದೇವಸ್ಥಾನದ ಹಾಗೂ ಇದರ ಧರ್ಮದರ್ಶಿಗಳಾದ ಸುರೇಶ ಕಲಾಲ ಹೆಸರು ಅಜರಾಮರವಾಗಿರುತ್ತದೆ ಎಂದು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ನುಡಿದರು.

ಕಿತ್ತೂರು ಸಮೀಪದ ಚನ್ನಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ರಥಸಪ್ತಮಿಯ ಪ್ರಯುಕ್ತ ಮಂಗಳವಾರ ಸೂರ್ಯದೇವರ 6ನೇ ವರ್ಷದ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ ಮಹಾರಾಜರು ದೇವಸ್ಥಾನ ಕಟ್ಟಿದ ಬಗ್ಗೆ ಶಿಲ್ಪಗಳಲ್ಲಿ ಕೆತ್ತಿದ ಇತಿಹಾಸ ಓದುತ್ತೇವೆ. ಹಾಗೆ ಸುರೇಶ ಕಲಾಲ ಸಾವಿರಾರು ವರ್ಷಗಳ, ಯುಗ-ಯುಗಗಳ ಕಾಲ ಉಳಿಯುವಂತ ಪುಣ್ಯದ ಕೆಲಸ ಮಾಡಿದ್ದಾರೆ. ಯಾರು ಜನಪರ ಕೆಲಸಗಳನ್ನು ಮಾಡುತ್ತಾರೋ ಅವರೇ ಪುಣ್ಯವಂತರು ಎಂದರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಇವತ್ತಿನ ಕಾಲದಲ್ಲಿ ಸಾರ್ವಜನಿಕ ಜನಪರವಾಗಿ ದೇವಸ್ಥಾನ ಕಟ್ಟುವುದು ಎಂದರೆ ಬಹಳ ಕಷ್ಟಕರವಾದ ಕೆಲಸ. ಕೇವಲ ಒಂದು ಮನೆ ಕಟ್ಟಬೇಕಾದರೇ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಾವೆಲ್ಲ ಸೂರ್ಯದೇವನನ್ನು ಪಠ್ಯಪುಸ್ತಕದಲ್ಲಿ, ಚಿತ್ರಗಳಲ್ಲಿ ನೋಡುತ್ತಿದ್ದೇವು. ಇವತ್ತು ಉತ್ತರ ಕರ್ನಾಟಕದಲ್ಲಿಯೇ ಎಲ್ಲೂ ಕಾಣದ ಸೂರ್ಯದೇವರ ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿ ದೊಡ್ಡ ಇತಿಹಾಸ ಸುರೇಶ ಕಲಾಲ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಜನಪರ ಕೆಲಸ ಮಾಡುವ ಯೋಜನೆಗಳು ಅವರಲ್ಲಿ ಇವೆ. ಅವುಗಳಿಗೆ ನನ್ನ ಸಹಾಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.6ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಅದ್ಧೂರಿಯಾಗಿ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲುಗೊಂಡು ಸೂರ್ಯದೇವರ ದರ್ಶನ ಪಡೆದು ಪುನೀತರಾದರು. ಎಸ್ಸೆಸ್ಸೆಲ್ಸಿಯಲ್ಲಿ ಹಾಗೂ ಇತರೆ ವಿಭಾಗದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಿದರು.ರಾಜಗುರು ಕಲ್ಮಠ ಕಿತ್ತೂರು ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿ , ಸಿದ್ಧಾರೂಢ ಗಿರಿಯಾಲ, ಚನ್ನಾಪುರ ಮಠದ ಸದಾನಂದ ಸ್ವಾಮೀಜಿ, ರಾಜಗುರು ಹಿರೇಮಠ ಗಂದಿವಾಡದ ಮೃತ್ಯುಂಜಯ ಸ್ವಾಮೀಜಿ, ಸೊಂದಾ ಮಹಾಬಲೇಶ್ವರ ಜೋಶಿ, ಗಣೇಶ ಜೋಶಿ, ಚಿದಂಬರ ಜೋಶಿ ಭಟ್ಟರು ಸಾನ್ನಿಧ್ಯ ವಹಿಸಿದ್ದರು. ರಾಮದುರ್ಗ ಸಂತರು ಮಾರುತಿ ಬಡಂಕರ್, ಸೂರ್ಯದೇವರ ದೇವಸ್ಥಾನದ ಧರ್ಮದರ್ಶಿ ಸುರೇಶ ಜೋರಾಪೂರ, ಚಂದ್ರಶೇಖರ್ ಪಾಸಲ್ಕರ್, ಕಿತ್ತೂರು ಪಪಂ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ, ಸಂತೋಷ ಪಾರಿಂಡೆಕರ್, ವಿಷ್ಣು ಕಲಾಲ, ಸಂತೋಷ್ ಕಲಾಲ, ಬಾಬು ಪರಂಡೇಕರ, ಬಸವರಾಜ ಸಂಗೊಳ್ಳಿ, ಅನಿಲ ಯಮ್ಮಿ, ಕಿರಣ ವಾಲಿಕರ ಸೇರಿದಂತೆ ಇತರರು ಗ್ರಾಮದ ಮುಖಂಡರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು. ಸುರೇಶ ತಳವಾರ ಸ್ವಾಗತಿಸಿದರು. ಮಂಜುನಾಥ ಕ್ಷೀರಸಾಗರ ನಿರೂಪಿಸಿದರು.