ಕೊಲೆ ಶಂಕೆ: ಉದ್ಯಮಿ ಶವ ಹೊರತೆಗೆದು ಪರೀಕ್ಷೆ

| Published : Oct 17 2024, 12:47 AM IST

ಸಾರಾಂಶ

ಬೆಳಗಾವಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ಪದ್ಮನ್ನವರ ಸಾವು ಅನುಮಾನಾಸ್ಪದವಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ ಎಂದು ಪುತ್ರಿ ಸಂಜನಾ ಪದ್ಮನ್ನವರ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದ ಶವವನ್ನು ಹೊರತೆಗೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೆ ವೇಳೆ ಸಂತೋಷ ಪತ್ನಿ ಮತ್ತು ಇತರೆ ನಾಲ್ವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. 2024, ಅ.9 ರಂದು ಮೃತಪಟ್ಟಿದ್ದ ಉದ್ಯಮಿ ಸಂತೋಷ ಪದ್ಮನ್ನವರ ಅವರ ಅಂತ್ಯಕ್ರಿಯೆಯನ್ನು ಸದಾಶಿವನಗರದ ಸ್ಮಶಾನಭೂಮಿಯಲ್ಲಿ ನೆರವೇರಿಸಲಾಗಿತ್ತು. ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪುತ್ರಿ ಸಂಜನಾ ಪದ್ಮನ್ನವರ ಇದು ಸಹಜ ಸಾವಲ್ಲ.. ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣಕುಮಾರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯಲ್ಲಿ ಮಣ್ಣಲ್ಲಿ ಹೂತಿದ್ದ ಸಂತೋಷ ಪದ್ಮನ್ನವರ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಬಿಮ್ಸ್‌ ವೈದ್ಯರು, ಎಫ್‌ಎಸ್‌ಎಲ್‌, ಫಾರೆನ್ಸಿಕ್‌, ಪೊಲೀಸರು ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಮಣ್ಣಲ್ಲಿ ಹೂಳಲಾಗಿದ್ದ ಸಂತೋಷ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೆ ಮೃತದೇಹವನ್ನು ಮಣ್ಣಲ್ಲಿ ಹೂಳಲಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಸಂತೋಷ ಸಾವು ಸಹಜವಲ್ಲ, ಕೊಲೆ ಎಂದು ಪೊಲೀಸರು ಕೂಡ ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ರಹಸ್ಯ ಬೆಳಕಿಗೆ ಬರಲಿದೆ.ಸಾವಿನ ಸುತ್ತ ಹಲವು ಅನುಮಾನ?:

ನಗರ ಆಂಜನೇಯ ನಗರದಲ್ಲಿ ಸಂತೋಷ ತಮ್ಮ ಮೂರಂತಸ್ತಿನ ಕಟ್ಟಡದಲ್ಲಿ ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರೊಂದಿಗೆ ವಾಸವಿದ್ದರು. ಅ.9ರಂದು ಸಂತೋಷ ರಾತ್ರಿ ಏಕಾಏಕಿ ಅಸುನೀಗಿದ್ದರು. ಹೃದಯಾಘಾತವೇ ಇದಕ್ಕೆ ಕಾರಣ ಎಂದು ಪತ್ನಿ ಹೇಳಿದ್ದರಿಂದ ಸಹಜವಾಗಿ ಅವರ ಸಂಬಂಧಿಕರು, ಬಂಧು ಬಳಗವೆಲ್ಲ ಸೇರಿ ಅ.10ರಂದು ಸಂತೋಷ ಅವರ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ನಡುವೆ ಅಪರಿಚಿತರು ಮನೆಯೊಳಗೆ ಪ್ರವೇಶಿಸಿದ್ದ ಸಿಸಿಟಿವಿಯ ದೃಶ್ಯಾವಳಿಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಇವರ ಸಾವಿನ ಸುತ್ತ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆ ಮಾಳಮಾರುತಿ ಠಾಣೆ ಪೊಲೀಸರು ಬೆರಳಚ್ಚು ತಜ್ಞರ ತಂಡದೊಂದಿಗೆ ಸುಮಾರು 5 ಗಂಟೆಗಳ ಕಾಲ ಬುಧವಾರ ಸತತವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂತೋಷ ಪದ್ಮಣ್ಣವರ ಪತ್ನಿ ಉಮಾ ಪದ್ಮಣ್ಣವರ ಹಾಗೂ ಮನೆಯ ಆಳುಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.ಸಿಸಿ ಟಿವಿ ಫೂಟೇಜ್‌ ಕೂಡ ಮಾಯ?:

ತಂದೆಯ ಅಂತ್ಯಕ್ರಿಯೆಗೆ ಬಂದ ಮಗಳಲ್ಲಿ ತಂದೆಯ ಮರಣದ ಬಗ್ಗೆ ಬಹಳ ಸಂದೇಹ ವ್ಯಕ್ತವಾಗಿದೆ. ಈ ವಿಚಾರ ಪದೇ ಪದೇ ಅವಳ ಮನದಲ್ಲಿ ಸುಳಿಯುತ್ತಿತ್ತು. ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದಂತೆ ಇನ್ನೇನು ಮನೆಯಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಬೇಕು ಎನ್ನುವಷ್ಟರಲ್ಲೇ ತಾಯಿ ಮಗಳನ್ನು ಗದರಿಸಿ ಮೊದಲು ಸ್ನಾನಕ್ಕೆ ಹೋಗು ಎಂದು ಕಳುಹಿಸಿದ್ದಾರಂತೆ. ಮರಳಿ ಬಂದು ನೋಡುವಷ್ಟರಲ್ಲಿ ಸಿಸಿಟಿವಿ ಫೂಟೇಜ್ ಮಾಯವಾಗಿದೆಯಂತೆ. ತಾಯಿಯನ್ನು ಕೇಳಿದಾಗ ತಾಯಿ ನಿನ್ನ ಸಹೋದರನೇ ಏನೋ ಮಾಡಲು ಹೋಗಿ ಡಿಲೀಟ್ ಮಾಡಿದ್ದಾನೆ ಎಂದಿದ್ದಾರಂತೆ. ಇನ್ನು ಸಹೋದರ ಸುಜಲ್ ಮತ್ತು ಅಕುಲ ಪದ್ಮಣ್ಣನವರ ಇಬ್ಬರನ್ನು ಸಂಜನಾ ಕೇಳಿದರೇ ಅವರು, ತಾಯಿಯೇ ಡಿಲೀಟ್ ಮಾಡುವಂತೆ ಹೇಳಿದ್ದಾರೆ ಎನ್ನಲಾಗಿದೆ.ಪಕ್ಕದ ಮನೆಯವರ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ ವೇಳೆ ಇಬ್ಬರು ವ್ಯಕ್ತಿಗಳು ಪದ್ಮನ್ನವರ ಮನೆಗೆ ಹೋಗಿ 40-45 ನಿಮಿಷದ ಬಳಿಕ ಮನೆ ಹೊರಗೆ ಬಂದಿರುವ ದೃಶ್ಯಗಳು ಸೆರೆಯಾಗಿವೆ. ಹೀಗಾಗಿ ಪೊಲೀಸರಿಗೆ ಈ ಸಾವಿನ ಬಗ್ಗೆ ಮತ್ತಷ್ಟು ಪುರಾವೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಉದ್ಯಮಿ ಸಂತೋಷ ಪದ್ಮನ್ನವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಪುತ್ರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸಂತೋಷ ಅವರ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅ‍ವರ ಸಾವಿನ ಬಗ್ಗೆ ನಿಖರವಾಗಿ ಗೊತ್ತಾಗಲಿದೆ. ಕೊಲೆ ಆಗಿರುವುದು ದೃಢಪಟ್ಟರೆ ಪೊಲೀಸ್‌ ತನಿಖೆ ಕೈಗೊಳ್ಳಲಾಗುವುದು.

-ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌,

ಪೊಲೀಸ್‌ ಆಯುಕ್ತರು