ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಅಂಥ್ರಾಕ್ಸ್ ರೋಗಕ್ಕೆ ಕಾಡಾನೆಯೊಂದು ಬಲಿಯಾಗಿದೆ. ಕುಂದಕೆರೆ ವಲಯದ ಚಿಗುರೆ ಕಡು ಬಳಿ ಸುಮಾರು ೩೦ ವರ್ಷದ ಹೆಣ್ಣಾನೆ ಮೃತಪಟ್ಟಿದ್ದು, ಮೇಲ್ನೋಟಕ್ಕೆ ಅಂಥ್ರಾಕ್ಸ್ ರೋಗಕ್ಕೆ ಬಲಿಯಾಗಿದೆ ಎಂದು ಅರಣ್ಯ ಇಲಾಖೆ ಅನುಮಾನ ಪಟ್ಟಿದೆ.ಮೃತ ಕಾಡಾನೆಯ ಬಾಯಿ, ಗುದದ್ವಾರ, ಕಿವಿ, ಬಾಲದಲ್ಲಿ ರಕ್ತ ಸೋರಿಕೆ ಕಂಡು ಬಂದಿದೆ. ಮೃತ ಕಾಡಾನೆ ಪರಿಶೀಲನೆ ಸಮಯದಲ್ಲಿ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಅಂಥ್ರಾಕ್ಸ್ ರೋಗದ ಗುಣ ಲಕ್ಷಣಗಳು ಮೇಲ್ನೋಟಕ್ಕೆ ಕಂಡಿದೆ ಎಂದಿದ್ದಾರೆ. ಕಾಡಾನೆ ಅಂಥ್ರಾಕ್ಸ್ ರೋಗದ ಶಂಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಾಡಾನೆ ಸತ್ತ ಸ್ಥಳಕ್ಕೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಕುಂದಕೆರೆ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಭೇಟಿ ನೀಡಿದ್ದರು.
ಎಸಿಎಫ್ ಕೆ.ಸುರೇಶ್ ಕನ್ನಡಪ್ರಭದೊಂದಿಗೆ ಮಾತನಾಡಿ, ಸತ್ತಿರುವ ಕಾಡಾನೆ ಗಮನಿಸಿದರೆ ಅಂಥ್ರಾಕ್ಸ್ ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸತ್ತ ಆನೆಯ ಕೆಲ ಅಂಗಾಂಗ ಹಾಗೂ ರಕ್ತವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಅಂಥ್ರಾಕ್ಸ್ ರೋಗದಿಂದ ಆನೆ ಸತ್ತಿದ್ದರೆ ಬಂಡೀಪುರ ಕಾಡಂಚಿನ ಪ್ರದೇಶದಲ್ಲಿನ ಜಾನುವಾರುಗಳಿಗೆ ಅಂಥ್ರಾಕ್ಸ್ ಬಂದಿದ್ದರೆ ಮಾಹಿತಿ ನೀಡಿ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಗೆ ಅರಣ್ಯ ಇಲಾಖೆ ಪತ್ರ ಬರೆಯಲಿದೆ ಎಂದರು. ಕಾಡಂಚಿನ ಗ್ರಾಮಗಳಲ್ಲಿ ಕಾಲು ಬಾಯಿ ಜ್ವರ ಹಾಗೂ ಇತರೆ ರೋಗದಿಂದ ಜಾನುವಾರು ಸಾವನ್ನಪ್ಪಿದ್ದರೆ ರೈತರು ಅರಣ್ಯ ಇಲಾಖೆ ಜೊತೆ ಮಾಹಿತಿ ಹಂಚಿಕೊಳ್ಳುವಂತೆ ಕೋರಿದ್ದಾರೆ.ಬಂಡೀಪುರ ಹುಲಿ ಯೋಜನೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಸೂಚನೆ ಮೇರೆಗೆ ಸತ್ತ ಆನೆಯನ್ನು ಸುಟ್ಟು ಹಾಕಲಾಗುತ್ತಿದೆ ಎಂದರು. ಅಂಥ್ರಾಕ್ಸ್ ದೃಢವಾದರೆ 10ಕಿಮೀ
ವ್ಯಾಪ್ತಿಯಲ್ಲಿ ಜಾನುವಾರಿಗೆ ಲಸಿಕೆಅಂಥ್ರಾಕ್ಸ್ ರೋಗದಿಂದ ಕಾಡಾನೆ ಮೃತ ಪಟ್ಟಿರುವುದು ದೃಢ ಪಟ್ಟರೆ ಆನೆ ಸತ್ತ ಸುಮಾರು ೧೦ಕಿಮೀ ದೂರದ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ಹಾಕಬೇಕಾಗುತ್ತದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಮೋಹನ್ ಕುಮಾರ್ ಹೇಳಿದ್ದಾರೆ. ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ, ಅಂಥ್ರಾಕ್ಸ್ ರೋಗಕ್ಕೆ ಬಲಿಯಾದ ಸತ್ತ ಜಾನುವಾರುಗಳನ್ನು ಬೀಸಾಡಿದರೂ ಅಂಥ್ರಾಕ್ಸ್ ರೋಗ ಬರುವ ಸಾಧ್ಯತೆ ಇದೆ ಎಂದರು.