- ಬಂಧಿತನ ವೈದ್ಯಕೀಯ ತಪಾಸಣೆ ನಂತರ ವಶಕ್ಕೆ ಪಡೆದ ಪೊಲೀಸರು ।
- ರಾಜ್ಯ, ಕೇಂದ್ರ ಭದ್ರತಾ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯ- - -
ಕನ್ನಡಪ್ರಭ ವಾರ್ತೆ ದಾವಣಗೆರೆಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸುವ ಬಯಕೆ ಹೊಂದಿರುವುದಾಗಿ ಪಾಕಿಸ್ತಾನದ ರಾಣಾ ಎಂಬಾತನಿಗೆ ಆಡಿಯೋ ಹಾಗೂ ವಾಟ್ಸಾಪ್ ಮೆಸೇಜ್ ಮಾಡಿದ್ದ ಬಂಧಿತ ಶಂಕಿತ ಉಗ್ರನನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಹರಿಹರ ಗ್ರಾಮಾಂತರ ಪೊಲೀಸರ ಒಪ್ಪಿಸಿದೆ.
ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ 15-20 ದಿನಗಳ ಹಿಂದೆ ಬಂದು, ಪೇಂಟಿಂಗ್ ಕೆಲಸದ ಹೆಸರಿನಲ್ಲಿ ವಾಸವಿದ್ದ ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆ ಮೂಲಕ ಸೊಹೇಲ್ (20) ಎಂಬಾತನನ್ನು ಮಂಗಳವಾರ ಬೆಳಗಿನ ಜಾವ ಪೊಲೀಸರು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ಒಪ್ಪಿಸಿ, ನಂತರ ಅಲ್ಲಿಂದ ಮತ್ತೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿತ್ತು.
ಬಂಧಿತ ಶಂಕಿತ ಉಗ್ರನನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಬುಧವಾರ ರಾತ್ರಿ ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ಕರೆ ತರಲಾಗಿತ್ತು. ಗುರುವಾರ ಬೆಳಗ್ಗೆ ಶಂಕಿತ ಉಗ್ರ ಸೊಹೇಲ್‌ನನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ, ಮುಖಕ್ಕೆ ಮುಸುಕು ಹಾಕಿಸಿಕೊಂಡು ಹರಿಹರ ತಾಲೂಕು ನ್ಯಾಯಾಲಯಕ್ಕೆ ಕರೆದೊಯ್ದು, ನ್ಯಾಯಾಧೀಶರ ಸಮಕ್ಷಮದಲ್ಲಿ ಹಾಜರುಪಡಿಸಲಾಯಿತು. ಬುಧವಾರ ಒಂದು ದಿನಕ್ಕೆ ನ್ಯಾಯಾಂಗ ಬಂಧನಕ್ಕೆ ಅನುಮತಿ ನೀಡಿದ್ದ ನ್ಯಾಯಾಲಯಕ್ಕೆ ಶಂಕಿತ ಉಗ್ರನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಇನ್ನೂ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತು.
ನ್ಯಾಯಾಲಯದಿಂದ ಅನುಮತಿ ಪಡೆದು, 10 ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಪಡೆದ ಪೊಲೀಸರು ಆತನನ್ನು ಮತ್ತಷ್ಟು ತನಿಖೆಗೆ ಒಳಪಡಿಸಲು ಮುಂದಾಗಿದ್ದಾರೆ. 10 ದಿನ ಕಸ್ಟಡಿಗೆ ಪಡೆದ ಪೊಲೀಸರು ಮತ್ತೆ ಬಂಧಿತ ಶಂಕಿತ ಉಗ್ರನನ್ನು ಅಲ್ಲಿನ ನ್ಯಾಯಾಲಯದಿಂದ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದು, ಪೊಲೀಸರು ಮತ್ತೆ ವಿಚಾರಣೆ ಆರಂಭಿಸಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶಂಕಿತನನ್ನು ಠಾಣೆಗೆ ಹಾಜರುಪಡಿಸಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸುವ ಮುನ್ನ ಆತನನ್ನು ವೈದ್ಯಾಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.ಶಂಕಿತ ಉಗ್ರನ ಮೊಬೈಲ್ ಫೋನ್, ಸಂಪರ್ಕ ಜಾಲ, ಆರ್ಥಿಕ ವ್ಯವಹಾರಗಳು ಹಾಗೂ ಇತರೆ ಚಟುವಟಿಕೆ ಬಗ್ಗೆ ಪೊಲೀಸರು ಸವಿವರ ಪರಿಶೀಲನೆ ಶುರು ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಭದ್ರತಾ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯ ನಡೆಯುತ್ತಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ವಿಚಾರಣೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇದೇ ವೇಳೆ, ಬನ್ನಿಕೋಡು ಗ್ರಾಮದಲ್ಲಿ ಶಂಕಿತನ ವಾಸ್ತವ್ಯದ ಹಿನ್ನೆಲೆ, ಆತನ ಸಂಪರ್ಕ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವುದೇ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬ ದೃಷ್ಟಿಯಿಂದಲೂ ತನಿಖೆ ಮುಂದುವರಿದಿದೆ.
ಹೆಚ್ಚಿನ ಮಾಹಿತಿಗಾಗಿ ಶಂಕಿತನನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ. ಪ್ರಕರಣದ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದ್ದು, ಹರಿಹರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.- - -
(ಬಾಕ್ಸ್-1)* ಬನ್ನಿಕೋಡು ಇಬ್ಬರು ಬ್ರದರ್ಸ್‌ಗಳೇ ನಾಪತ್ತೆ! ಉತ್ತರ ಪ್ರದೇಶದ ಮೂಲದ ಪೇಂಟಿಂಗ್ ಕೆಲಸಗಾರರು ತಮ್ಮೊಂದಿಗೆ ಹರಿಹರ ತಾ. ಬನ್ನಕೋಡು ಗ್ರಾಮದಲ್ಲಿ 15-20 ದಿನಗಳಿಂದ ಇದ್ದಂತಹ ತಮ್ಮದೇ ರಾಜ್ಯದ ಶಂಕಿತ ಉಗ್ರ ಸೊಹೇಲ್ (20) ಬಂಧನ ಆಗಿರುವುದಕ್ಕೆ ಶಾಕ್ ಆಗಿದ್ದರೂ, ಎಂದಿನಂತೆ ಸಮೀಪದ ಕಾರ್ಖಾನೆಯಲ್ಲಿ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದಾರೆ.
ತಾವೆಲ್ಲರೂ 10-15 ದಿನದ ಹಿಂದಷ್ಟೇ ಕೆಲಸಕ್ಕೆ ಬಂದಿದ್ದೇವೆ. ನಾವು ಪೇಂಟಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ತಮಗೆ ಆತನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಿದ್ದೇವೆ. ನಮಗೆ ಹೆಚ್ಚಿನ ಮಾಹಿತಿ ಏನೂ ಗೊತ್ತಿಲ್ಲವೆಂದು ಬಂಧಿತ ಶಂಕಿತ ಉಗ್ರನ ಸಹೋದ್ಯೋಗಿ ಜಹೇದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಸೊಹೇಲ್ ಬಂಧನದ ನಂತರ ಬನ್ನಿಕೋಡು ಗ್ರಾಮದಲ್ಲೇ ಇದ್ದಂತಹ ಇಬ್ಬರು ಸಹೋದರರು ಅಲ್ಲಿಂದ ಹೋಗಿದ್ದಾರೆ. ಬನ್ನಿಕೋಡು ಮನೆ ಖಾಲಿ ಮಾಡಿ ಹೋದ ಆ ಇಬ್ಬರು ಯಾರೆಂಬ ಬಗ್ಗೆ ಈಗ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಹೀಗೆ ಹೋದ ಸಹೋದರರು ಸಹ ಸೊಹೇಲ್‌ನ ರೀತಿಯ ಮನಸ್ಥಿತಿಯವರಾ ಅಥವಾ ಮುಗ್ಧರಾ ಎಂಬ ಪ್ರಶ್ನೆ ಪೊಲೀಸ್ ಇಲಾಖೆಯನ್ನು ಚಿಂತೆಗೀಡು ಮಾಡಿದೆ ಎನ್ನಲಾಗಿದೆ.
- - -(ಬಾಕ್ಸ್-2) * 2 ತಿಂಗಳ ಹಿಂದೆ ಸೊಹೇಲ್‌ಗೆ ಮೊಬೈಲ್ ಕೊಡಿಸಿದ್ದೆ: ಶೋಯೆಬ್
- ಇಂದು ಅಥವಾ ನಾಳೆ ಹರಿಹರಕ್ಕೆ ಬಂಧಿತ ಶಂಕಿತ ಉಗ್ರನ ಹೆತ್ತವರ ಆಗಮನ? ದಾವಣಗೆರೆ: ಎರಡು ತಿಂಗಳ ಹಿಂದಷ್ಟೇ ಸೊಹೇಲ್‌ಗೆ ಮೊಬೈಲ್ ಕೊಡಿಸಿದ್ದೆ. ಆದರೆ, ಪಾಕಿಸ್ತಾನ ಮೂಲದ ಗ್ರೂಪ್‌ಗಳಿಗೆ ಈತನ ನಂಬರ್ ಹೇಗೆ ಸೇರಿಕೊಂಡಿದೆಯೋ ಗೊತ್ತಿಲ್ಲ ಎಂದು ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಪೊಲೀಸರು ಬಂಧಿಸಿದ ಉತ್ತರ ಪ್ರದೇಶ ಮೂಲಕ ಶಂಕಿತ ಉಗ್ರ ಸೊಹೇಲ್‌ನ ಸಹೋದರ ಶೋಯೆಬ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ತಾವು ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆಯವರು. ತನ್ನ ತಂದೆ, ತಾಯಿಗೆ ಒಟ್ಟು 10 ಜನ ಮಕ್ಕಳು. ಅದರಲ್ಲಿ 6 ಜನ ಸಹೋದರಿಯರು, ನಾಲ್ವರು ಸಹೋದರರಿದ್ದೇವೆ. ಸೊಹೇಲ್ ನಮ್ಮೆಲ್ಲರಿಗಿಂತ ಕಿರಿಯನಾಗಿದ್ದಾನೆ. ಆತನ ವಯಸ್ಸೂ ಕಡಿಮೆ ಇದೆ. ಆಧಾರ್ ಕಾರ್ಡ್ ಸಹ ಅಪ್‌ಡೇಟ್ ಮಾಡಿಸಿದ್ದೆವು. 2 ತಿಂಗಳ ಹಿಂದಷ್ಟೇ ಸೊಹೇಲ್‌ಗೆ ಮೊಬೈಲ್ ಕೊಡಿಸಿದ್ದೆ ಎಂದು ಆತನ ಸಹೋದರ ತಿಳಿಸಿದ್ದಾನೆ.
ನನ್ನದೇ ಗುರುತಿನ ಪತ್ರ ನೀಡಿ, ಆತನಿಗೆ ಸಿಮ್ ಸಹ ಕೊಡಿಸಿದ್ದೆ. ಈ ಹಿಂದೆ ದೆಹಲಿಯ ನೊಯ್ಡಾ ಸೇರಿದಂತೆ ಹಲವಾರು ಕಡೆ ಕೆಲಸ ಮಾಡಿದ್ದೆವು. ಪಾಕಿಸ್ತಾನ ಮೂಲಕ ಗ್ರೂಪ್‌ಗಳಲ್ಲಿ ಯಾರು ಸೊಹೇಲ್‌ನನ್ನು ಸೇರಿಸಿದ್ದಾರೋ ಗೊತ್ತಿಲ್ಲ. ಆ ಗ್ರೂಪ್‌ಗಳಲ್ಲಿ ಏನು ಮಾತುಕತೆ ಆಗಿದೆಯೋ ತಮಗೆ ಮಾಹಿತಿ ಇಲ್ಲ. ಮಂಗಳವಾರ ನಸುಕಿನ ವೇಳೆ ಪೊಲೀಸರು ಬಂದು, ನಮ್ಮ 8 ಜನರನ್ನು ಕರೆದೊಯ್ದಿದ್ದರು ಎಂದು ಆತ ಹೇಳಿದ್ದಾನೆ.ಅನಂತರ ಸೊಹೇಲ್ ಮೊಬೈಲ್‌ನಲ್ಲಿ ಏನು ಪತ್ತೆಯಾಗಿದೆಯೋ ನನಗೆ ಮಾಹಿತಿ ಇಲ್ಲ. ತನ್ನ ಸಹೋದರ ಸೊಹೇಲ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಕಳಿಸಿದ ಎಲ್ಲ ವಿಚಾರವನ್ನು ತಮ್ಮ ತಂದೆ, ತಾಯಿಗೆ ತಿಳಿಸಿದ್ದೇನೆ. ಶುಕ್ರವಾರ ಅಥವಾ ಶನಿವಾರ ತನ್ನ ತಂದೆ, ತಾಯಿಗಳು ಸಹ ಇಲ್ಲಿಗೆ ಬರಬಹುದು ಎಂದು ಬಂಧಿತ ಶಂಕಿತ ಉಗ್ರನ ಸಹೋದರ ಶೋಯೆಬ್ ಮಾಹಿತಿ ನೀಡಿದ್ದಾನೆ.
- - --(ಫೋಟೋಗಳಿವೆ)