ಅಮಾನತು ವೈದ್ಯೆ ಮತ್ತೆ ನಿಯೋಜನೆಗೆ ಖಂಡನೆ

| Published : Nov 21 2024, 01:01 AM IST

ಸಾರಾಂಶ

ಕನಕಪುರ: ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದ ಡಾ. ದಾಕ್ಷಾಯಿಣಿ ಅವರನ್ನು ಮತ್ತೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೆ ನಿಯೋಜಿಸಿರುವುದು ಸರಿಯಲ್ಲ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಖಂಡಿಸಿದರು.

ಕನಕಪುರ: ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದ ಡಾ. ದಾಕ್ಷಾಯಿಣಿ ಅವರನ್ನು ಮತ್ತೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೆ ನಿಯೋಜಿಸಿರುವುದು ಸರಿಯಲ್ಲ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಖಂಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ತ್ರೀರೋಗ ಹಾಗೂ ಹೆರಿಗೆ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ದಾಕ್ಷಾಯಿಣಿ ಅವರ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣವನ್ನು ಪ್ರಗತಿಪರ ಸಂಘಟನೆಗಳು ಸಾಕ್ಷಿ ಸಮೇತ ಬಯಲಿಗೆಳೆದ್ದವು, ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಚಿಕ್ಕಬಳ್ಳಾಪುರದ ಭಟ್ಟರಹಳ್ಳಿ ಎಂಬಲ್ಲಿಗೆ ವರ್ಗ ಮಾಡಲಾಗಿತ್ತು. ಅವರು ಪ್ರಕರಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈಗ ಮತ್ತೆ ಅವರ ಪ್ರಭಾವಕ್ಕೆ ಮಣಿದು ಇಲಾಖೆ ಅವರನ್ನು ಅದೇ ಸ್ಥಳಕ್ಕೆ ನಿಯೋಜಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಗತಿಪರ ಸಂಘಟನೆಗಳ ಪರವಾಗಿ ನ್ಯಾಯಲಯದಲ್ಲಿ ವಕೀಲರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು, ಹಾಗೂ ಅವರಿಗೆ ಕಾನೂನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದರು.

ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಡಾ. ದಾಕ್ಷಾಯಣಿ ಈ ಹಿಂದೆಯೂ ಬಡವರೊಬ್ಬರಿಗೆ ಹೆರಿಗೆ ಮಾಡಿಸಲು 5000 ಲಂಚ ಕೇಳಿದ ಪ್ರಕರಣ ಆಡಿಯೋ ಸಮೇತ ಹೋರಾಟ ಮಾಡಲಾಗಿತ್ತು. ಲಂಚ ಕೊಡದವರ ಬಗ್ಗೆ ನಿರ್ಲಕ್ಷ್ಯವಾಗಿ ವರ್ತಿಸುವ ಹಲವಾರು ಆರೋಪ ಅವರ ಮೇಲಿದೆ. ಅವರನ್ನು ತಕ್ಷಣ ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಡಿಯಲ್ಲಿ ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು, ನೇಗಿಯೋಗಿ ಸಂಘಟನೆಯ ಕಾಡೇಗೌಡ, ಜೀವನ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ, ವೈಭವ ಕರ್ನಾಟಕ ಜಿಲ್ಲಾಧ್ಯಕ್ಷ ಪುಟ್ಟಲಿಂಗಯ್ಯ, ರೇಷ್ಮೆ ಉತ್ಪದಾಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಕನ್ನಡ ಭಾಸ್ಕರ ಜಯ ಕರ್ನಾಟಕ ಜನಪರ ವೇದಿಕೆ ಗಿರೀಶ್, ಸಾಮಾಜಿಕ ಕಾರ್ಯಕರ್ತ ಕಿಶೋರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜು ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಅಮಾನತುಗೊಂಡಿದ್ದ ಡಾ.ದಾಕ್ಷಾಯಿಣಿ ಅವರನ್ನು ಮತ್ತೇ ಅದೇ ಹುದ್ದೆಗೆ ನಿಯೋಜಿಸಿರುವುದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಖಂಡಿಸಿದರು.