ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಸೀಗೆಹಳ್ಳಿ ಬಳಿ ಇರುವ ಚಟ್ಟನಹಳ್ಳಿಯ ಶ್ರೀ ಹನುಮಂತರಾಯ ಸ್ವಾಮಿ ದೇವಾಲಯ ಮತ್ತು ನರಸಿಂಹಸ್ವಾಮಿ ದೇವಾಲಯದ ಪೂಜೆ ಮಾಡದ ಇಬ್ಬರು ಪೂಜಾರರಿಗೆ ತಹಸೀಲ್ದಾರ್ ಎನ್. ಎ. ಕುಂಈ ಅಹಮದ್ ರವರು ಅಮಾನತು ಶಿಕ್ಷೆ ವಿಧಿಸಿದ್ದಾರೆ.ಗ್ರಾಮದ ಹನುಮಂತರಾಯ ಸ್ವಾಮಿ ದೇವಾಲಯದ ಪೂಜಾರಿ ವೆಂಕಟೇಶ್ ದೇವರ ಪೂಜೆ ಮಾಡದೇ ದುಶ್ಚಟಗಳಿಗೆ ಬಲಿಯಾಗಿ ಮದ್ಯದ ಅಮಲಿನಲ್ಲಿ ಇರುತ್ತಾರೆಂದು ಗ್ರಾಮಸ್ಥರು ದೂರಿದ್ದರು. ವೆಂಕಟೇಶ್ ಪ್ರತಿ ದಿನ ದೇವರಿಗೆ ಪೂಜೆ ಮಾಡುತ್ತಿರಲಿಲ್ಲ. ಅಲ್ಲದೆ ದೇವರ ಹೆಸರಿಗೆ ಬಿಡಲಾಗಿದ್ದ ಸುಮಾರು 5.20 ಎಕರೆ ಜಮೀನನ್ನು ಬಹುಭಾಗ ಪರಭಾರೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದರು.
ತಹಸೀಲ್ದಾರ್ ಕುಂಈ ಅಹಮದ್ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಅರ್ಚಕ ವೆಂಕಟೇಶ್ ಮದ್ಯದ ಅಮಲಿನಲ್ಲಿ ಇದ್ದುದನ್ನು ಕಣ್ಣಾರೆ ಕಂಡರು. ಆತನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದರು.ನಂತರ ಇದೇ ಗ್ರಾಮದಲ್ಲಿರುವ ನರಸಿಂಹ ಸ್ವಾಮಿ ದೇವಾಲಯದ ಮತ್ತೊಬ್ಬ ಅರ್ಚಕ ಗಣೇಶ್ ಎಂಬುವವರು ದೇವಸ್ಥಾನಕ್ಕೆ ಬಾರದೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದರೆ ದೇವಾಲಯದ ಹೆಸರಿನಲ್ಲಿ ಬರುವ ತಸ್ತಿಕ್ ಹಣವನ್ನು ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಹಸೀಲ್ದಾರ್ ರಲ್ಲಿ ದೂರಿದರು.
ಕೂಡಲೇ ತಹಸೀಲ್ದಾರ್ ರವರು ಅರ್ಚಕ ಗಣೇಶ್ ಗೆ ಕರೆ ಮಾಡಿ ಮಾತನಾಡಿದಾಗ ಆತ ತಾನು ಬೆಂಗಳೂರಿನಲ್ಲಿ ಇರುವುದಾಗಿ ಹೇಳಿದ. ಇಂದು ಸಂಕ್ರಾಂತಿ ಹಬ್ಬದ ದಿನವಾಗಿದ್ದರೂ ಸಹ ಗ್ರಾಮದ ದೇವಸ್ಥಾನಗಳ ಬಾಗಿಲು ತೆರೆಯದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ಒಂದೆರಡು ವರ್ಷಗಳಿಂದಲೂ ಅರ್ಚಕರು ದೇವಾಲಯದ ಬಾಗಿಲು ಸಹ ತೆಗೆಯದೆ ಕರ್ತವ್ಯ ಲೋಪವ್ಯಸಗುತ್ತಿದ್ದಾರೆಂದು ಗ್ರಾಮಸ್ಥರು ತಹಸೀಲ್ದಾರ್ ರಲ್ಲಿ ದೂರು ಸಲ್ಲಿಸಿದರು.ದೇವಾಲಯದ ಜಮೀನನ್ನು ಇತರೆಯವರಿಗೆ ಮಾರಾಟ ಮಾಡಲಾಗಿದೆ. ಈ ದೇವಾಲಯಕ್ಕೆ ಈ ಜಮೀನು ಬಿಟ್ಟರೆ ಬೇರೆ ಏನೂ ಆದಾಯ ಇಲ್ಲದಿರುವುದರಿಂದ ಯಾರೂ ಸಹ ಪೂಜೆ ಮಾಡಲು ಬರುತ್ತಿಲ್ಲವೆಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು. ದೇವಸ್ಥಾನದ ಹೆಸರಿನಲ್ಲಿ ಇರುವ ಜಮೀನನ್ನು ಯಾರಿಗೂ ಮಾರಾಟ ಮಾಡಬಾರದು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ದೇವಾಲಯದ ಜಮೀನನ್ನು ತಮ್ಮ ತಾತ ರಾಮಾಂಜನೇಯಸ್ವಾಮಿಯವರು ನಿಧನರಾದ ಹತ್ತಾರು ವರ್ಷಗಳ ನಂತರ ಅದೇ ರಾಮಾಂಜನೇಯಸ್ವಾಮಿಯವರ ಹೆಸರಿಗೆ ಜಮೀನಿನ ದಾಖಲೆ ಮಾಡಿಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಕುಟುಂಬದ ಸದಸ್ಯರ ಹೆಸರನ್ನು ಬದಿಗೊತ್ತಿ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿರುವುದನ್ನು ತನಿಖೆ ಮಾಡಬೇಕು ಹಾಗೂ ಅಕ್ರಮವಾಗಿ ಜಮೀನನ್ನು ಪರಭಾರೆ ಮಾಡಿರುವುದನ್ನು ತಡೆಹಿಡಿಯಬೇಕೆಂದು ಸಹ ಚಟ್ಟನಹಳ್ಳಿ ಗ್ರಾಮಸ್ಥರು ತಹಸೀಲ್ದಾರ್ ಅಹಮದ್ ರಲ್ಲಿ ಮನವಿ ಮಾಡಿಕೊಂಡರು.ಇಲ್ಲಿಯ ಹನುಮಂತರಾಯಸ್ವಾಮಿ ದೇವಾಲಯದ ಅರ್ಚಕ ವೆಂಕಟೇಶ್ ಮತ್ತು ನರಸಿಂಹಸ್ವಾಮಿ ದೇವಾಲಯದ ಅರ್ಚಕ ಗಣೇಶ್ ಇಬ್ಬರೂ ಸಹೋದರರಾಗಿದ್ದಾರೆ.
ಗ್ರಾಮದ ಮುಖಂಡರಾದ ಗಂಗಣ್ಣಿ, ಗುಡಿಗೌಡರಾದ ನಾರಾಯಣ, ವಿಶ್ವನಾಥ್, ಗಂಗಣ್ಣ, ರವಿಕುಮಾರ್, ದಿಲೀಪ್, ಲಕ್ಷ್ಮಣ್, ಮೂಡಲಗಿರಿ ಗೌಡ, ನಾರಾಯಣ್, ಗೋವಿಂದರಾಜು, ವೆಂಕಟೇಶ್, ವೆಂಕಟೇಶ್ ಗೌಡ, ಶೋಭಾ, ಗಂಗಮ್ಮ, ಸತೀಶ್ ಸೇರಿದಂತೆ ಹಲವಾರು ಮಂದಿ ಇದ್ದರು.