ಆಂಧ್ರಪ್ರದೇಶದ ‘ಆರ್.ಕೆ. ದುಗ್ಗಲ್ ಸ್ಟುಡಿಯೋಸ್’ ತಂಡವು ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಮೋಟೆ ತೂಗು ಸೇತುವೆಯ ಮೇಲೆ ಭಾರಿ ತೂಕದ ಚಿತ್ರೀಕರಣ ಸಾಮಗ್ರಿಗಳನ್ನು ಸಾಗಿಸುತ್ತಿತ್ತು.

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಪಂ ವ್ಯಾಪ್ತಿಯ ನಾಥಗೇರಿ-ಮೋಟೆ ಸಂಪರ್ಕಿಸುವ ತೂಗು ಸೇತುವೆಯ ತಂತಿಯೊಂದು ತುಂಡಾಗಿ ಬಿದ್ದು ಅಪಘಾತವಾಗುವುದು ಸ್ವಲ್ಪದರಲ್ಲಿ ತಪ್ಪಿದೆ.

ಈ ಪ್ರದೇಶಕ್ಕೆ ತೆಲುಗು ಸಿನಿಮಾದ ಚಿತ್ರೀಕರಣ ತಂಡ ಆಗಮಿಸಿತ್ತು. ಅವರು ಶೂಟಿಂಗ್ ನಡೆಸುವ ವೇಳೆ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಯಾವುದೇ ಅಪಾಯ ಉಂಟಾಗಿಲ್ಲ.

ಆಂಧ್ರಪ್ರದೇಶದ ‘ಆರ್.ಕೆ. ದುಗ್ಗಲ್ ಸ್ಟುಡಿಯೋಸ್’ ತಂಡವು ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಮೋಟೆ ತೂಗು ಸೇತುವೆಯ ಮೇಲೆ ಭಾರಿ ತೂಕದ ಚಿತ್ರೀಕರಣ ಸಾಮಗ್ರಿಗಳನ್ನು ಸಾಗಿಸುತ್ತಿತ್ತು. ಈ ವೇಳೆ ಏಕಾಏಕಿ ಸೇತುವೆಯ ಒಂದು ಬದಿಯ ಕಬ್ಬಿಣದ ಹಗ್ಗ (ಕೇಬಲ್) ತುಂಡಾಗಿ ಸೇತುವೆ ಪಕ್ಕಕ್ಕೆ ವಾಲಿದೆ. ಸಮೀಪದಲ್ಲಿದ್ದ ತೆಂಗಿನ ಮರಕ್ಕೆ ಸೇತುವೆ ಒರಗಿದ್ದರಿಂದ ಪೂರ್ಣ ಪ್ರಮಾಣದಲ್ಲಿ ನದಿಗೆ ಉರುಳುವುದು ತಪ್ಪಿದೆ. ಇದರಿಂದಾಗಿ ಸೇತುವೆ ಮೇಲಿದ್ದ ಚಿತ್ರತಂಡದ ಸದಸ್ಯರು ಗಂಡಾಂತರದಿಂದ ಪಾರಾಗಿದ್ದಾರೆ.

ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಈ ತೂಗು ಸೇತುವೆಯು ಈ ಹಿಂದೆ ಹತ್ತಕ್ಕೂ ಹೆಚ್ಚು ಕನ್ನಡ, ತೆಲುಗು ಸಿನಿಮಾ, ಧಾರಾವಾಹಿಗಳು, ಪ್ರಿ-ವೆಡ್ಡಿಂಗ್ ಶೂಟಿಂಗ್ ಹಾಗೂ ಸಾಕ್ಷ್ಯಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ತಾಣವಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆಯು ಶಿಥಿಲಾವಸ್ಥೆಗೆ ತಲುಪಿತ್ತು. ಹೀಗಾಗಿ "ಸೇತುವೆ ಸುರಕ್ಷಿತವಾಗಿಲ್ಲ, ಭಾರಿ ಸಾಮಗ್ರಿ ಸಾಗಣೆ ಹಾಗೂ ಹೆಚ್ಚಿನ ಜನರ ಸಂಚಾರವನ್ನು ನಿಷೇಧಿಸಲಾಗಿದೆ " ಎಂದು ಖರ್ವಾ ಗ್ರಾಪಂ ಎಚ್ಚರಿಕೆ ಫಲಕ ಅಳವಡಿಸಿತ್ತು. ಇದನ್ನು ಗಮನಿಸದ ಚಿತ್ರತಂಡವು ನಿಯಮ ಮೀರಿ ಭಾರಿ ತೂಕದ ಉಪಕರಣಗಳನ್ನು ಒಯ್ದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ನಾಥಗೇರಿ ಮತ್ತು ಮೋಟೆ ಗ್ರಾಮಸ್ಥರಿಗೆ ನಿತ್ಯ ಸಂಚಾರಕ್ಕೆ ಹಾಗೂ ಪ್ರವಾಹದ ಸಮಯದಲ್ಲಿ ಇದೊಂದೇ ಸೇತುವೆ ಮುಖ್ಯ ಆಸರೆಯಾಗಿತ್ತು. ಸೇತುವೆ ಹಾನಿಗೊಳಗಾಗಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನದಿ ದಾಟಲು ದೋಣಿಯನ್ನು ಆಶ್ರಯಿಸುವಂತಾಯಿತು. ಸ್ಥಳೀಯರು ಚಿತ್ರತಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸೇತುವೆಯನ್ನು ತಕ್ಷಣ ದುರಸ್ತಿಗೊಳಿಸಿಕೊಡುವಂತೆ ಪಟ್ಟು ಹಿಡಿದರು.

ಘಟನಾ ಸ್ಥಳಕ್ಕೆ ಪಿಡಿಒ ಗಿರೀಶ್ ನಾಯಕ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೇಗೌಡ ಹಾಗೂ ತಾಪಂ ನಿರ್ದೇಶಕ ಕಿರಣ್ ಕುಮಾರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಂಚಾಯತಿಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಹಾಗೂ ಎಚ್ಚರಿಕೆ ಫಲಕವಿದ್ದರೂ ಶೂಟಿಂಗ್ ನಡೆಸಿದ್ದಕ್ಕೆ ಪಿಡಿಒ ಗಿರೀಶ್ ನಾಯಕ್, ಲೈನ್ ಪ್ರೊಡ್ಯೂಸರ್ ಗೌತಮ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಆನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪಿಡಿಒ ಗಿರೀಶ ನಾಯಕ್, ಎರಡು ದಿನದ ಹಿಂದೆ ಆರ್.ಕೆ. ದುಗ್ಗಲ್ ಸ್ಟುಡಿಯೋಸ್ ತಂಡ ಆಂಧ್ರ ಪ್ರದೇಶದಿಂದ ತೆಲುಗು ಸಿನಿಮಾ ಶೂಟಿಂಗ್ ಮಾಡಲು ಇಲ್ಲಿಗೆ ಬಂದಿದೆ. ಗ್ರಾಪಂನಿಂದ ಪರವಾನಗಿ ಪಡೆದಿಲ್ಲ. ಈ ತೂಗು ಸೇತುವೆ ಸುಸ್ಥಿತಿಯಲ್ಲಿಲ್ಲ, ಕಬ್ಬಿಣದ ಸಲಕರಣೆಗಳು ತುಕ್ಕು ಹಿಡಿದಿತ್ತು. ಭಾರಿ ಸಾಮಗ್ರಿ ಇಲ್ಲಿ ಸಾಗಿಸಬಾರದು ಮತ್ತು ಒಮ್ಮೆಲೇ ಹೆಚ್ಚು ಜನ ಓಡಾಡಬಾರದು ಎಂದು ಎಚ್ಚರಿಕೆ ಫಲಕ ಹಾಕಲಾಗಿದೆ. ಈಗ ಭಾರವಾದ ಸಾಮಗ್ರಿ ಸಾಗಿಸುವ ಸಂದರ್ಭದಲ್ಲಿ ಸೇತುವೆಗೆ ಹಾನಿ ಆಗಿದೆ. ಈ ಹಿಂದೆ ಸಚಿವ ಮಂಕಾಳ ವೈದ್ಯ ಅವರು ಭೇಟಿ ನೀಡಿದ್ದಾಗ ಹೊಸ ಸೇತುವೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಚಿತ್ರತಂಡದವರಿಂದಲೇ ದುರಸ್ತಿ ಕಾರ್ಯ ಮಾಡಿಸಲಾಗುವುದು ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ್ ಮಾತನಾಡಿ, ಸ್ಥಳೀಯರ ಸಹಕಾರದೊಂದಿಗೆ ಚಿತ್ರತಂಡದವರ ಬಳಿ ಮಾತುಕತೆ ನಡೆಸಲಾಗಿದ್ದು, ಸೇತುವೆ ದುರಸ್ತಿಪಡಿಸಿಕೊಡುವ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಬೇಕು ಎಂದರು.

ಈ ಹಿಂದೆ ಸೇತುವೆ ನಿರ್ಮಿಸಿದ್ದ ''''''''''''''''ಭಾರದ್ವಾಜ ಕನ್‌ಸ್ಟ್ರಕ್ಷನ್ಸ್‌'''''''''''''''' ಕಂಪನಿಯನ್ನು ಸ್ಥಳದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿ, ದುರಸ್ತಿ ಕಾರ್ಯದ ಅಂದಾಜು ವೆಚ್ಚದ ಮಾಹಿತಿ ಕೋರಲಾಗಿದೆ. ಬಳಿಕ ಪಂಚಾಯಿತಿ ವತಿಯಿಂದ ಶರತ್ತುಬದ್ಧ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು, ದುರಸ್ತಿ ವೆಚ್ಚ ಭರಿಸಲು ಚಿತ್ರತಂಡದ ಪ್ರತಿನಿಧಿಗಳಾದ ಗೌತಮ್ ಹಾಗೂ ರಾಜೇಶ್ ಅವರಿಂದ ಒಪ್ಪಿಗೆ ಪಡೆದು, ಸಹಿ ಮಾಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರಿಂದ 112 ವಾಹದ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಗ್ರಾಮಸ್ಥರಾದ ರಾಮಪ್ಪ ನಾಯ್ಕ, ರಾಮ ನಾಯ್ಕ, ತನೋಜ್ ನಾಯ್ಕ, ಗಜಾನನ ನಾಯ್ಕ, ಮಂಜುನಾಥ ನಾಯ್ಕ, ಸತೀಶ್ ನಾಯ್ಕ, ವಿಷ್ಣು ನಾಯ್ಕ, ಅಜಿತ್ ನಾಯ್ಕ ಮತ್ತಿತರಿದ್ದರು.