ಅವಧಿ ಮೀರಿದ ಔಷಧ ಬಳಸಿದರೆ ಅಮಾನತು: ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್

| Published : Jul 13 2024, 01:33 AM IST

ಅವಧಿ ಮೀರಿದ ಔಷಧ ಬಳಸಿದರೆ ಅಮಾನತು: ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅವಧಿ ಮೀರಿದ ಔಷಧಗಳ ಬಳಕೆ ಅಥವಾ ವಿತರಿಸಿದರೆ ಸಂಬಂಧಿಸಿದವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ರಾಮನಗರದಲ್ಲಿ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದರು.

-ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಡಿಸಿ ಎಚ್ಚರಿಕೆಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಅವಧಿ ಮೀರಿದ ಔಷಧಗಳ ಬಳಕೆ ಅಥವಾ ವಿತರಿಸಿದರೆ ಸಂಬಂಧಿಸಿದವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರದ ಕೂಗಳತೆಯಲ್ಲಿರುವ ರಾಜಧಾನಿ ಬೆಂಗಳೂರಿನಿಂದ ಆರೋಗ್ಯ ಇಲಾಖೆಗೆ ಅಗತ್ಯವಿರುವ ಔಷಧ, ಮಾತ್ರೆ ತರಲು ಕಷ್ಟವೇನು? ಅವಧಿ ಮೀರಿದ ಔಷಧ ಮಾತ್ರೆಗಳಿದ್ದರೆ ನನ್ನ ಗಮನಕ್ಕೆ ತರಬೇಕು. ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ನೀಡುವ ಲಸಿಕೆಯನ್ನು ಎರಡೆರಡು ಬಾರಿ ಪರೀಕ್ಷಿಸಿಯೇ ನೀಡಬೇಕು. ಅವಧಿ ಮೀರಿದ ಔಷಧಗಳ ಬಳಕೆ ಸಲ್ಲ, ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ವೈಯಕ್ತಿಕ ಗಮನ ಹರಿಸಬೇಕು ಎಂದರು.

ಲಸಿಕೆಗಳು, ಔಷಧಿಗಳು, ಮಾತ್ರೆ ಸೇರಿದಂತೆ ಮೆಡಿಕಲ್ ಸರಂಜಾಮುಗಳನ್ನು ದಾಸ್ತಾನಿಗೆ ತೆಗೆದುಕೊಳ್ಳುವ ಸಮಯದಲ್ಲಿ ಅವುಗಳ ಅವಧಿ ಪರಿಶೀಲಿಸಬೇಕು. ಒಂದು ವೇಳೆ ಅವಧಿ ಮುಕ್ತಾಯಗೊಂಡಿದ್ದರೆ ವಿಲೇವಾರಿ ಮಾಡಬೇಕು. ಮಾಗಡಿಯಲ್ಲಿ ಅವಧಿ ಮೀರಿದ ಗ್ಲೂಕೋಸ್ ನೀಡಿಕೆ ಪ್ರಕರಣ ಉದಾಹರಿಸಿ ಮಾತನಾಡಿ, ಇನ್ನು ಮುಂದೆ ಈ ಘಟನೆಗಳು ಮರುಕಳಿಸಿದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೂವರೆಗೂ ಜಿಲ್ಲೆಯಲ್ಲಿ ಒಟ್ಟು 93 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ರೋಗಿಗಳಲ್ಲಿ ಡೆಂಘೀ ಲಕ್ಷಣಗಳು ಪತ್ತೆಯಾದರೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ವಾರ್ ರೂಮ್ ಸಂಖ್ಯೆ 9449843266ಗೆ ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ತಿಳಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ. ರಾಜು, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಂಜುನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಶಶಿಧರ್, ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿ ಡಾ. ಕುಮಾರ್, ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.