ಸಾರಾಂಶ
ಆದೇಶ ಹೊರಡಿಸಿದ್ದರೂ ವೇಬ್ರಿಜ್ ತೂಕದ ಯಂತ್ರ ರಿಪೇರಿ ಮಾಡಿಸಿಲ್ಲ. ಇದನ್ನು ಪರಿಶೀಲನೆ ಮಾಡಬೇಕೆಂದು ಸಿಂದಗಿ ಪಟ್ಟಣದ ಎಪಿಎಂಸಿಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಾಯಿತು. ಆದೇಶಕ್ಕೆ ಅನುಸಾರ ಕಾರ್ಯ ಮಾಡದಿರುವ ಎಪಿಎಂಸಿ ಕಾರ್ಯದರ್ಶಿ ಬಿ.ಎಲ್. ಜುಮನಾಳ ಅವರನ್ನು ತತಕ್ಷಣದಲ್ಲಿ ಅಮಾನತ್ತು ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಸಿಂದಗಿ
ಸಕ್ಕರೆ ಕಾರ್ಖಾನೆಗಳಲ್ಲಿ ರೈತರು ಕಳುಹಿಸುತ್ತಿರುವ ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಈಗಾಗಲೇ ನನಗೆ ಸಾಕಷ್ಟು ದೂರುಗಳು ಬಂದಿವೆ. ರೈತರಿಗೆ ಆಗುತ್ತಿರುವ ವಂಚನೆ ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಎಪಿಎಂಸಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ರೈತ ಸಂಘಟನೆಗಳು ನನಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡಲು ಡಿಜಿಟಲ್ ತೂಕದ ಯಂತ್ರ ಅಳವಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಡಿಜಿಟಲ್ ಯಂತ್ರಗಳಿಂದ ತೂಕದಲ್ಲಿ ಮೋಸವಾಗುವುದಿಲ್ಲ ಎಂದರು.
ಕೆಲವು ಕಾರ್ಖಾನೆಯ ಮಾಲೀಕರು ಡಿಜಿಟಲ್ ಯಂತ್ರ ಅಳವಡಿಸಿದ್ದಾರೆ. ಇನ್ನೂ ಕೆಲವು ಕಾರ್ಖಾನೆಯ ಮಾಲೀಕರು ಯಂತ್ರ ಅಳವಡಿಸಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯುವ ನಿಟ್ಟಿನಲ್ಲಿ ಎಪಿಎಂಸಿ ಕಾರ್ಯದರ್ಶಿಗಳಿಗೆ ಡಿ.22 ರಂದು ಎಪಿಎಂಸಿಯಲ್ಲಿರುವ ವೇಬ್ರಿಜ್ ತೂಕದ ಯಂತ್ರಗಳ ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿ ಇಡುವಂತೆ ಆದೇಶವನ್ನು ಮಾಡಲಾಗಿದೆ ಎಂದರು. ಎಪಿಎಂಸಿಗೆ ರೈತರು ತೂಕಕ್ಕಾಗಿ ಬಂದರೆ ಅವರಿಗೆ ಉಚಿತ ತೂಕ ಮಾಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ರೈತರು ಎಪಿಎಂಸಿಯಲ್ಲಿ ನೀಡಿದಂತಹ ತೂಕದ ರಶೀದಿ ತಮ್ಮ ಬಳಿ ಇಟ್ಟುಕೊಳ್ಳಬೇಕು. ಕಾರ್ಖಾನೆಯಲ್ಲಿ ತೂಕ ಮಾಡಿದ ನಂತರ ತೂಕದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಲಿಖಿತ ರೂಪದಲ್ಲಿ ಒಂದು ಅರ್ಜಿ ಸಲ್ಲಿಸಬೇಕು. ರೈತರಿಂದ ದೂರು ಬಂದರೆ ಕಾರ್ಖಾನೆಯ ಕ್ರಷಿಂಗ್ ಪರವಾನಿಗೆ ಈ ವರ್ಷದ ಮಟ್ಟಿಗೆ ರದ್ದು ಮಾಡುವ ಹಾಗೂ ಕಾರ್ಖಾನೆಯ ಮಾಲೀಕರಿಗೆ ದಂಡ ವಿಧಿಸಿ ಶಿಕ್ಷೆ ಕೊಡಿಸುವ ಅವಕಾಶವು ಇದೆ. ಇದನ್ನು ರೈತರು ತಿಳಿದು ಮೋಸ ಹೋಗದಂತೆ ನಿಗಾ ವಹಿಸಬೇಕು ಎಂದರು.ಈ ವೇಳೆ ಶಾಸಕ ಅಶೋಕ ಮನಗೂಳಿ, ಪ್ರಸನ್ನ ಕುಮಾರ ಜೇರಟಗಿ, ಮಲ್ಲು ಶಂಬೇವಾಡ ಸೇರಿ ಕಾರ್ಯಕರ್ತರು, ಅಧಿಕಾರಗಳು ಇದ್ದರು.--ಕೋಟ್..ಆದೇಶ ಹೊರಡಿಸಿದ್ದರೂ ವೇಬ್ರಿಜ್ ತೂಕದ ಯಂತ್ರ ರಿಪೇರಿ ಮಾಡಿಸಿಲ್ಲ. ಇದನ್ನು ಪರಿಶೀಲನೆ ಮಾಡಬೇಕೆಂದು ಸಿಂದಗಿ ಪಟ್ಟಣದ ಎಪಿಎಂಸಿಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಾಯಿತು. ಆದೇಶಕ್ಕೆ ಅನುಸಾರ ಕಾರ್ಯ ಮಾಡದಿರುವ ಎಪಿಎಂಸಿ ಕಾರ್ಯದರ್ಶಿ ಬಿ.ಎಲ್. ಜುಮನಾಳ ಅವರನ್ನು ತತಕ್ಷಣದಲ್ಲಿ ಅಮಾನತ್ತು ಮಾಡಲಾಗುತ್ತಿದೆ.
ಶಿವಾನಂದ ಪಾಟೀಲ. ಸಚಿವ --