ಧಾರವಾಡ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನ್ನ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿ ಪಲಾಯನವಾದ ಅನುಸರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಲ್ಲಿ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ ಎಂದು ಹೇಳಿದರು. ಆರ್‌ಸಿಬಿ ತಂಡದ ಸಂಭ್ರಮಾಚರಣೆಗೆ ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಮಾಡಲು ಅಸಾಧ್ಯ ಎಂದು ಪೊಲೀಸ್ ಆಯುಕ್ತ ದಯಾನಂದ ಮುಖ್ಯಮಂತ್ರಿಗೆ ಹೇಳಿದ್ದರು. ಹಿಂದಿನ ದಿನ ರಾತ್ರಿಪೂರ್ತಿ ದೊಡ್ಡ ಪ್ರಮಾಣದಲ್ಲಿ ಜನರು ಕುಣಿದು ಕುಪ್ಪಳಿಸಿದ್ದರು. ಅದನ್ನೇ ನಿರ್ವಹಿಸಲು ಪೊಲೀಸರಿಗೆ ಸಾಕು ಸಾಕಾಗಿ ಹೋಗಿತ್ತು. ಈ ಕಾರಣದಿಂದ ಪೊಲೀಸ್ ಆಯುಕ್ತರು ಭದ್ರತೆ ಕಷ್ಟಸಾಧ್ಯ ಎಂದಿದ್ದರು. ಆದರೆ, ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಪೈಪೋಟಿಗೆ ಬಿದ್ದು ಅನುಮತಿ ಕೊಡಿಸಿದ್ದಾರೆ ಎಂದು ಜೋಶಿ ಆರೋಪಿಸಿದರು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಪರಿಷತ್ ಸದಸ್ಯ ಗೋವಿಂದರಾಜ್ ಅವರನ್ನು ಕೈಬಿಟ್ಟಿದ್ದು ಏಕೆ? ಅವರು ಏನಾದರೂ ತಪ್ಪು ಮಾಡಿರಬಹುದಲ್ವ? ಹಾಗಿದ್ದರೆ ಅವರ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಅವರಿವರನ್ನು ಅಮಾನತುಗೊಳಿಸಿ ಪ್ರಕರಣವನ್ನು ಜನರಿಂದ ಮರೆಸುವ ಕೆಲಸ ನಡೆಯುತ್ತಿದೆ. ಆದರೆ, ಅಮಾಯಕ ಜನರ ಸಾವನ್ನು ಜನ ಮರೆಯುವುದಿಲ್ಲ. ಮಂತ್ರಿಗಳ ಮಕ್ಕಳು ವಿಧಾನಸೌಧ ಎದುರು ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಂಡರು. ಅವರಿಗೆ ವಿಧಾನಸೌಧಕ್ಕೆ ಅನುಮತಿ ಕೊಟ್ಟಿದ್ದು ಯಾರು? ನೂರಾರು ಜನ ವೇದಿಕೆಯಲ್ಲಿದ್ದರು. ಮುಖ್ಯಮಂತ್ರಿ ಇರುವ ವೇದಿಕೆಗಳಲ್ಲಿ ಈ ರೀತಿ ಮಾಡುವಂತಿಲ್ಲ. ಇದಕ್ಕೆಲ್ಲಾ ಯಾರು ಹೊಣೆ ಎಂದು ಜೋಶಿ ಪ್ರಶ್ನಿಸಿದರು.
ಅಂದು ಮಧ್ಯಾಹ್ನ 3.10ಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಮೊದಲ ಸಾವು ಆಯಿತು. ಅದಾದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಮುಖ್ಯಮಂತ್ರಿ- ಉಪಮುಖ್ಯಮಂತ್ರಿಗೆ ನಾಚಿಕೆ ಬರೋದಿಲ್ವ? ಇದಕ್ಕೆಲ್ಲ ನ್ಯಾಯಾಲಯವೇ ಕಠಿಣ ಕ್ರಮ ಕೈಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮುಂದುವರಿಯಬಾರದು ಎಂದು ಜೋಶಿ ಕಟುವಾಗಿ ಟೀಕಿಸಿದರು.ಪೊಲೀಸ್ ಅಧಿಕಾರಿಗಳ ಅಮಾನತುಸರ್ಕಾರದ ಪಲಾಯನವಾದ: ಜೋಶಿ
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನ್ನ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿ ಪಲಾಯನವಾದ ಅನುಸರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.