ಪೊನ್ನಂಪೇಟೆ ಸರ್ಕಾರಿ ಭೂಮಾಪಕ ಅಮಾನತು

| Published : Jan 21 2025, 12:30 AM IST

ಸಾರಾಂಶ

ಸಾರ್ವಜನಿಕರ ದೂರಿನ ಹಿನ್ನೆಲೆ ಭೂ ಮಾಪಕರ ಬಳಿ ಇದ್ದ 197 ಕಡತ ಮರುವಶಕ್ಕೆ ಪಡೆದು ಅನಿರ್ದಿಷ್ಟ ಅವಧಿಗೆ ಅಮಾನತು ಮಾಡಿ ಇಲಾಖೆ ಕ್ರಮ ಜರುಗಿಸಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ಭೂ ದಾಖಲೆಗಳ ಮತ್ತು ಭೂಮಾಪನ ಕಚೇರಿಯಲ್ಲಿ ಭೂಮಾಪನ ಮಾಡಲು ಸಾರ್ವಜನಿಕರ ಕಡತ ಪಡೆದು ನಂತರ ಕಡತದೊಂದಿಗೆ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಭೂಮಾಪಕರ ವಿರುದ್ಧ ಸಾರ್ವಜನಿಕರ ದೂರಿನ ಹಿನ್ನಲೆ ಭೂಮಾಪಕರ ಬಳಿ ಇದ್ದ 197 ಕಡತ ಮರುವಶಕ್ಕೆ ಪಡೆದು, ಅನಿರ್ದಿಷ್ಟ ಅವಧಿಗೆ ಅಮಾನತು ಮಾಡಿ ಇಲಾಖೆ ಕ್ರಮ ಜರುಗಿಸಿದೆ.

ಪೊನ್ನಂಪೇಟೆ ಭೂಮಾಪನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಭೂಮಾಪಕ ಕಿರಣ್ ಹೆಚ್. ಸಿ. ಅಮಾನತುಗೊಂಡ ಭೂಮಾಪಕರಾಗಿದ್ದಾರೆ.

ಸದರಿ ಭೂಮಾಪಕ ನಿಯಮಾನುಸಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನಿರ್ದೇಶನದಂತೆ ಹಲವಾರು ಕಡತ ಸಹಿತ ಜಾಗಗಳ ಭೂಮಾಪನಕ್ಕೆ ನೀಡಲಾಗಿತ್ತು. ಅಂತಹ ಕಡತವನ್ನು ಕಚೇರಿಯಲ್ಲಿರಿಸದೆ, ಈ ಭೂಮಾಪಕರು ಕಚೇರಿಗೆ ತಿಂಗಳಿನಿಂದ ಹಾಜರಾಗದೆ, ಇಲಾಖೆಧಿಕಾರಿಗಳು, ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸದೇ ನಾಪತ್ತೆಯಾಗಿದ್ದ ಹಿನ್ನಲೆ ಸಾರ್ವಜನಿಕರು ಇಲಾಖೆಧಿಕಾರಿಗಳಿಗೆ ದೂರು ನೀಡಿದ್ದರು.

ಈ ಹಿನ್ನಲೆ ಸರ್ಕಾರಿ ಭೂಮಾಪಕ ಕಿರಣ್ ಹೆಚ್. ಸಿ. ಅವರಿಗೆ ಅಂತಿಮ ತಿಳುವಳಿಕೆ ನೋಟಿಸ್ ಜಾರಿಗೊಳಿಸಿದ ಇಲಾಖೆ ಕಡತಗಳನ್ನು ಕಚೇರಿಗೆ ತಲುಪಿಸಲು ಸೂಚಿಸಿತ್ತು. ಈ ಹಿನ್ನಲೆ ಅವರಿಂದ 197 ಕಡತ ವಶಕ್ಕೆ ಪಡೆದು, ಬೇರೆ ಭೂಮಾಪಕರಿಗೆ ಮುಂದಿನ ಕ್ರಮಕ್ಕೆ ನೀಡಿದೆ.

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಬಾನಂಗಡ ಡಿ. ಅರುಣ ಅವರ ಶಿಫಾರಸ್ಸಿನಂತೆ ಮಡಿಕೇರಿ ಉಪ ನಿರ್ದೇಶಕರಾದ ಸುಜಯ್ ಕುಮಾರ್ ಅವರು ಭೂ ಮಾಪಕ ಕಿರಣ್ ಎಚ್. ಸಿ. ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.