ಸಾರಾಂಶ
ಇಬ್ಬರ ಅಮಾನತು, ಹಲವರ ವಿರುದ್ಧ ಕ್ರಮಕ್ಕೆ ಸೂಚನೆ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಗುಬ್ಬಿಯ ಟಿಎಪಿಎಂಸಿಯ ನ್ಯಾಯಬೆಲೆ ಅಂಗಡಿ ಸಂಖ್ಯೆ 98ರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು, ಕುಣಿಗಲ್ ತಾಲೂಕಿನ ಕೊತ್ತಗೆರೆಯ ಇಂದಿರಾಗಾಂಧಿ ವಸತಿ ಶಾಲೆಯ ಕಂಪ್ಯೂಟರ್ ಆಪರೇಟರ್ ಹಾಗೂ ಎಫ್‌ಡಿಸಿ ಸಹಾಯಕ ನಾಗರಾಜ ಶೀರ್ತಿಭಾವಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆ ಜೊತೆಗೆ 18 ಇಲಾಖೆಗಳು ಸಹಯೋಗತ್ವ ಹೊಂದಿವೆ. ಹೀಗಾಗಿ ನಾವು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ವೈದ್ಯರ ಕೊರತೆ ಇದೆ. ಸುಮಾರು ತಿಂಗಳಿಂದ ವೈದ್ಯರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಹೆರಿಗೆ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಹಲವು ವೈದ್ಯರ ಕೊರತೆ ಇದೆ. ಕೂಡಲೇ ವೈದ್ಯರ ನೇಮಿಸುವಂತೆ ಡಿಎಚ್ಓ ರಿಗೆ ಸೂಚಿಸಲಾಗಿದೆ. ಇದಲ್ಲದೇ ಆಸ್ಪತ್ರೆ ರೋಗಿಗಳಿಗೆ ತಿಂಡಿ, ಊಟ ಸಹ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಬರುವವರೇ ಬಡವರು ಆಗಿರುವುದರಿಂದ ಅವರಿಗೆ ಎಲ್ಲ ಸೌಕರ್ಯಗಳು ಸಿಗುವಂತಾಗಬೇಕು. ಕೂಡಲೇ ಆಸ್ಪತ್ರೆಯ ರೋಗಿಗಳಿಗೆ ತಿಂಡಿ, ೨ ಹೊತ್ತಿಗೆ ಊಟ ನೀಡಬೇಕು ಎಂದು ಸೂಚಿಸಿದರು.
ಪಟ್ಟಣದ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ವಸತಿ ನಿಲಯದಲ್ಲಿ ಶುಚಿತ್ವವನ್ನು ಕಾಪಾಡಿಲ್ಲ, ಮಕ್ಕಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟ ಇಲ್ಲವಾಗಿದೆ. ಮಕ್ಕಳಿಗೆ ನೀಡಿರುವ ಅಕ್ಕಿಯ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ. ದಾಸ್ತಾನು ದಾಖಲಾತಿಯಲ್ಲಿ ಒಂದು ತಿಂಗಳ ಮೊದಲೇ ದಾಸ್ತಾನು ಇದೆ ಎಂದು ಬರೆಯಲಾಗಿದೆ. ಈ ಬಗ್ಗೆ ವಾರ್ಡನ್ ಮತ್ತು ನಿಲಯದ ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಡಾ.ಎಚ್.ಕೃಷ್ಣ ಹೇಳಿದರು. ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ಹಳೆಯದಾಗಿದೆ. ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ. ಶೌಚಾಲಯಗಳ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ದೂರಿದರು. ರೈತ ಸಂಪರ್ಕ ಕೇಂದ್ರದಲ್ಲಿಯೂ ಸಹ ಬಿತ್ತನೆ ರಾಗಿ ದಾಸ್ತಾನಿನಲ್ಲಿ ಲೋಪ ಕಂಡು ಬಂದಿದೆ. ೧೫ ಕಿಂಟಾಲ್ ರಾಗಿ ಇದೆ ಎಂದು ಪುಸ್ತಕದಲ್ಲಿ ನಮೂದಾಗಿದೆ. ಆದರೆ ಸ್ಟಾಕ್ ಪರಿಶೀಲಿಸಿದರೆ ೩೮ ಕ್ವಿಂಟಾಲ್ ರಾಗಿ ದಾಸ್ತಾನು ಕಂಡು ಬಂದಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದರು. ಈ ಸಂಧರ್ಭದಲ್ಲಿ ಸದಸ್ಯರಾದ ನಿಂಗರಾಜ್‌ಕೋಟೆ, ಸುಮಂತ್‌ರಾವ್, ಕಾರ್ಯದರ್ಶಿ ಸುಜಾತ ಹೊಸಮನೆ, ಹುಲಿಗಿರಿ ರಾಜ್‌ಕೋಟೆ, ಮಾರುತಿ ದೊಡ್ಡಲಿಂಗಣ್ಣ, ವಿಜಯಲಕ್ಷ್ಮೀ, ಆಹಾರ ಇಲಾಖೆ ಉಪ ನಿರ್ದೇಶಕ ಮಂಟೆಸ್ವಾಮಿ, ತಹಶೀಲ್ದಾರ್ ರೇಣುಕುಮಾರ್ ಸೇರಿದಂತೆ ಇತರರು ಇದ್ದರು.