ಸಾರಾಂಶ
ಅಸ್ಪೃಶ್ಯತೆ ಮನೋಭಾವ ಹೊಂದಿರುವ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಅವರು ಉದ್ದೇಶ ಪೂರಕವಾಗಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಾರೆ. ಈ ಉನ್ನತ ಅಧಿಕಾರಿಯ ದಲಿತ ವಿರೋಧಿ ನೀತಿಗೆ ಜಿಲ್ಲೆಯ 12 ಮಂದಿ ಪಿಡಿಒಗಳ ಮೇಲೆ ಅಮಾನತು ಶಿಕ್ಷೆ ನೀಡಿರುವುದು ಜೀವಂತ ಸಾಕ್ಷಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಅಸ್ಪೃಶ್ಯತೆ ಮನೋಭಾವ ಹೊಂದಿರುವ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಅವರು ಉದ್ದೇಶ ಪೂರಕವಾಗಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಾರೆ. ಈ ಉನ್ನತ ಅಧಿಕಾರಿಯ ದಲಿತ ವಿರೋಧಿ ನೀತಿಗೆ ಜಿಲ್ಲೆಯ 12 ಮಂದಿ ಪಿಡಿಒಗಳ ಮೇಲೆ ಅಮಾನತು ಶಿಕ್ಷೆ ನೀಡಿರುವುದು ಜೀವಂತ ಸಾಕ್ಷಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ನೌಕರರನ್ನೇ ಗುರಿಯಾಗಿಸಿಕೊಂಡು ಟಾರ್ಚರ್ ನೀಡುತ್ತಾರೆ. ಈ ಜೊತೆಗೆ ಸ್ವಜಾತಿ ವ್ಯಾಮೋಹ ಕೂಡಾ ಅವರಲ್ಲಿ ಎದ್ದು ಕಾಣುತ್ತಿದೆ. ಹಾಗಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಹಣ ದುರ್ಬಳಕೆ ಎಂದು ದಲಿತ ಪಿಡಿಒ ಶಿವಕುಮಾರ್ ಅವರನ್ನು ತುರ್ತು ಅಮಾನತು ಮಾಡಿದ ಸಿಇಒ ಅದೇ ಅಕ್ರಮ ಎನ್ನಲಾದ ಕೆಲಸದಲ್ಲಿ ಮುಖ್ಯ ಪಾತ್ರಧಾರಿ ಸ್ವಜಾತಿಯ ಎಂಜಿನಿಯರ್ ಗೋವಿಂದರಾಜು ಅವರನ್ನು ಪ್ರಕರಣದಿಂದ ಕೈ ಬಿಟ್ಟಿದ್ದಾರೆ ಎಂದು ನೇರ ಆರೋಪ ಮಾಡಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆಲಸದಲ್ಲಿ ಮೂಗು ತೂರಿಸುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು, ಅವರು ಗುತ್ತಿಗೆದಾರರಿಗೂ ಹಿಂಸೆ ನೀಡುತ್ತಾರೆ. ಸಾಲ ಮಾಡಿ ಕೆಲಸ ಮಾಡುವ ಗುತ್ತಿಗೆದಾರ ಇನ್ನೆರೆಡು ತಿಂಗಳಲ್ಲಿ ಹಣ ವಾಪಸ್ ಹೋದರೆ ಬೀದಿಗೆ ಬೀಳುತ್ತಾರೆ. ತಾಲೂಕು ಪಂಚಾಯಿತಿ ಸದಸ್ಯರೊಬ್ಬರ ಕೆಲಸವನ್ನು ಹೀಗೆ ವಿಳಂಬ ಮಾಡಿ ಹಣ ಮರಳಿ ಹೋಗುವಂತೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಸಾಥ್ ನೀಡದ ಕೋ ಆರ್ಡಿನೇಟರ್ ಗಳಿಗೆ ನೋಟಿಸ್ ಜಾರಿ ಮಾಡಿ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಾರೆ. ಸರ್ವಾಧಿಕಾರ ಪ್ರದರ್ಶನ ಮಾಡುವ ಇವರು ಈ ಹಿಂದೆ ಕೆಲಸ ಮಾಡಿದ ಐದೂ ಮಂದಿ ಸಿಇಒಗಳು ಎಂದೂ ಈ ರೀತಿಯ ವರ್ತನೆ ತೋರಿರಲಿಲ್ಲ. ಕೂಡಲೇ ಸರ್ಕಾರ ಜಿಪಂ ಸಿಇಒ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಬಗರ್ ಹುಕುಂ ಸಮಿತಿ ಸದಸ್ಯ ಜಿ.ವಿ.ಮಂಜುನಾಥ್ ಮಾತನಾಡಿ 12 ಮಂದಿ ದಲಿತ ಪಿಡಿಒಗಳ ಅಮಾನತು ಬಗ್ಗೆ ಜಿಲ್ಲಾ ಸಚಿವರಾದ ಪರಮೇಶ್ವರ್ ಉತ್ತರ ನೀಡಬೇಕು. ಸರ್ಕಾರ ಈ ದಲಿತ ವಿರೋಧಿ ಮನಸ್ಥಿತಿ ತೊಡೆಯಬೇಕು. ಕೆಲಸದಿಂದ ವಜಾ ಗೊಳಿಸುವ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಸಚಿವರ ಮನೆ ಬಳಿಯೇ ದಲಿತರು ಹೋರಾಟ ನಡೆಸುತ್ತಾರೆ ಎಂದು ಎಚ್ಚರಿಸಿದರು. ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ದಲಿತರನ್ನು ಮಾತ್ರ ಗುರಿಯಾಗಿಸುವ ಉನ್ನತ ಅಧಿಕಾರಿ ಪ್ರಭು ಅವರ ವರ್ತನೆ ಖಂಡನೀಯ ಎಂದರು. ಮೇದಾರರ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಮಾತನಾಡಿದರು. ಪಪಂ ಸದಸ್ಯ ಕುಮಾರ್, ದಲಿತ ಮುಖಂಡರಾದ ಶಿವಪ್ಪ, ಜಗದೀಶ್, ಈಶ್ವರಯ್ಯ, ಕಲ್ಲೂರು ರವಿ, ಮಂಜಣ್ಣ, ರವೀಶ್, ನಾಗಭೂಷಣ, ನಟರಾಜ್, ವಾಲ್ಮೀಕಿ ಸಮಾಜದ ಅಡವೀಶಯ್ಯ, ಸವಿತಾ ಸಮಾಜದ ಪಾಪಣ್ಣ, ಮುಸ್ಲಿಂ ಸಮಾಜದ ಇಮ್ರಾನ್ ಇತರರು ಇದ್ದರು.