ಶಂಕಿತ ನಕ್ಸಲ್ ಪತ್ತೆ ಬೆನ್ನಲ್ಲೆ ಅನುಮಾನ, ಆತಂಕ

| Published : Sep 05 2025, 01:00 AM IST

ಶಂಕಿತ ನಕ್ಸಲ್ ಪತ್ತೆ ಬೆನ್ನಲ್ಲೆ ಅನುಮಾನ, ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಲಿ ಹತ್ತು ಹಲವು ಅಪರಾಧಗಳಲ್ಲಿ ಆರೋಪಿ, ತಲೆಮರೆಸಿಕೊಂಡು ಇಲ್ಲಿ ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಶಂಕಿತ ನಕ್ಸಲ್‌ ಮನೋಜ ಸದಾನನ್ನು ಪೊಲೀಸರು ಬಂಧಿಸಿರುವ ಪ್ರಕರಣ ಇದೀಗ ಕೈಗಾರಿಕಾ ವಲಯದಲ್ಲಿ ಸಂಚಲನ ಮೂಡಿಸಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಅಲ್ಲಿ ಹತ್ತು ಹಲವು ಅಪರಾಧಗಳಲ್ಲಿ ಆರೋಪಿ, ತಲೆಮರೆಸಿಕೊಂಡು ಇಲ್ಲಿ ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಶಂಕಿತ ನಕ್ಸಲ್‌ ಮನೋಜ ಸದಾನನ್ನು ಪೊಲೀಸರು ಬಂಧಿಸಿರುವ ಪ್ರಕರಣ ಇದೀಗ ಕೈಗಾರಿಕಾ ವಲಯದಲ್ಲಿ ಸಂಚಲನ ಮೂಡಿಸಿದೆ.

ಜಿಲ್ಲೆಯಲ್ಲಿರುವ ಶಾಖೋತ್ಪನ್ನ ಸ್ಥಾವರಗಳು, ಔಷಧಿ ತಯಾರಿಕಾ ಕಂಪನಿಗಳು, ಅಕ್ಕಿ ಗಿರಣಿ, ಹತ್ತಿ ಮಿಲ್‌ ಸೇರಿದಂತೆ ಬಹುತೇಕ ಎಲ್ಲ ಕಾರ್ಖಾನೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅನ್ಯ ರಾಜ್ಯದ ಕಾರ್ಮಿಕರು ದುಡಿಯುತ್ತಿದ್ದಾರೆ. ಇದೀನ ಶಂಕಿತ ನಕ್ಸಲ್‌ ಪತ್ತೆಯಾಗಿರುವುದು ಉಳಿದ ಎಲ್ಲ ಕಾರ್ಮಿಕರ ಮೇಲೆ ಅನುಮಾನ ಮೂಡಿಸುವಂತೆ ಮಾಡುವುದರ ಜೊತೆಗೆ ಮಾಲೀಕರು, ಸ್ಥಳೀಯ ಕಾರ್ಮಿಕರನ್ನು ಆತಂಕ್ಕೀಡು ಮಾಡಿದೆ.

ಶಂಕಿತ ನಕ್ಸಲ್‌, ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ 18 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಿಹಾರ ಮೂಲದ ಮನೋಜ ಸದಾನನ್ನು ಆ ರಾಜ್ಯದ ಖಗಾರಿಯಾ ಜಿಲ್ಲೆಯ ಅಲೌಲಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಗ್ರಾಮೀಣ ಠಾಣೆಯ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡು ಸ್ಥಳೀಯ ಯರಮರಸ್‌ ಕೈಗಾರಿಕಾ ಪ್ರದೇಶದ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ ಸದಾನನ್ನು ಹಿಡಿದು ವಶಕ್ಕೆ ಪಡೆದುಕೊಂಡು ತಮ್ಮ ರಾಜ್ಯಕ್ಕೆ ಕರೆದುಕೊಂಡು ಹೋಗಿದ್ದು, ಈ ಪ್ರರಣವು ಉಳಿದ ಅನ್ಯರಾಜ್ಯದ ಕಾರ್ಮಿಕರು ಎಂಥವರೋ ಎನ್ನುವಂತಹ ಅನುಮಾನದ ಹುತ್ತ ಬೆಳೆಯಲು ಕಾರಣವಾಗಿದೆ.

ಸವಾಲು: ನೂರಾರು ಸಂಖ್ಯೆಯಲ್ಲಿರುವ ಕಾರ್ಖಾನೆಗಳಲ್ಲಿ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರಂತೂ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ದುಡಿಯುತ್ತಿದ್ದಾರೆ. ಉದ್ಯಮಿಗಳು, ಅಕ್ಕಿ ಗಿರಣ, ಹತ್ತಿ ಮಿಲ್‌ ಮಾಲೀಕರರು ಸಹ ಹೆಚ್ಚಾಗಿ ಪರಿಶೀಲನೆ ನಡೆಸದೇ ಅವರನ್ನು ಕೆಲಸಕ್ಕಿಟ್ಟುಕೊಳ್ಳುವ ಪದ್ಧತಿ ಹಲವು ವರ್ಷಗಳಿಂದ ಸಾಗಿದ್ದು ಇದರಿಂದಾಗಿ ರಾಯಚೂರು ನಗರದ ಕೆಲ ಪ್ರದೇಶ, ಸಾಲ್ವೇಂಟ್‌, ಯರಮರಸ್‌, ಶಕ್ತಿನಗರ ಕೈಗಾರಿಕಾ ವಲಯದಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸಗಡ್‌ ಸೇರಿ ಅನ್ಯರಾಜ್ಯದ ಕಾರ್ಮಿಕರು ಜೀವನ ಸಾಗಿಸುತ್ತಿದ್ದು ಇದೀಗ ಶಂಕಿತ ನಕ್ಸಲ್‌ ಪತ್ತೆಯ ಪ್ರಕರಣದಿಂದ ಅವರೆಲ್ಲರು ಎಂತವರು ಎನ್ನುವುದನ್ನು ಪರಿಶೀಲಿಸಬೇಕಾದಂತಹ ಸಮಯ ಬಂದಂತಾಗಿದ್ದು, ಅವರುಗಳ ಹಿನ್ನೆಲೆಯ ಖಚಿತ ಮಾಹಿತಿಯನ್ನು ಪತ್ತೆ ಹೆಚ್ಚಿ ಕಲೆ ಹಾಕುವ ಸವಾಲು ಎದುರಾಗಿದೆ.

ಈಗಲಾದರೂ ಜಿಲ್ಲಾಡಳಿತ, ಪೊಲೀಸ್‌ ಹಾಗೂ ಉದ್ಯಮಿಗಳು, ಮಾಲೀಕರು ಗಂಭೀರವಾಗಿ ಪರಿಗಣಿಸಬೇಕು, ಬಂದವರನ್ನು ಕೆಲಸಕ್ಕೆ ಇಟ್ಟುಕೊಳ್ಳದೇ ಅವರ ಸಮಗ್ರ ಮಾಹಿತಿಯನ್ನು ಪಡೆಯುವ ಕಾರ್ಯ ವಾಗಬೇಕು ಅಷ್ಟೇ ಅಲ್ಲದೇ ಅಕ್ರಮ, ಅಪರಾಧಗಳ ಪ್ರಕರಣಗಳಿಂದ ಬಂದವರು ದುಡಿಯುತ್ತಿದ್ದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮವಾಗಬೇಕು ಎನ್ನುವ ಒತ್ತಾಯ ಜನಸಾಮಾನ್ಯರದ್ದಾಗಿದೆ.

90 ರ ನಕ್ಸಲ್ ಚಳವಳಿಯ ನೆನಪು, ಹೊಸ ತಲೆನೋವು

ಕರ್ನಾಟಕ ರಾಜ್ಯದಲ್ಲಿ ನಕ್ಸಲ್‌ ಚಳವಳಿಗೆ ನಾಂದಿ ಹಾಡಿದ ಜಿಲ್ಲೆಯ ರಾಯಚೂರು. 1990ರ ದಶಕದಲ್ಲಿ ಸಕ್ರಿಯವಾಗಿದ್ದ ಚಳವಳಿ ಬದಲಾದ ನಕ್ಸಲ್‌ ಬರಿ ಚಿಂತನೆ ಹಾಗೂ ಸಾಮಾಜಿಕ ಹೋರಾಟದಿಂದ ಬೇರೆಡೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಸುಮಾರು ದಶಕಗಳಿಂದ ಕಣ್ಮರೆಯಾಗಿತ್ತು. ಇದೀಗ ಬಿಹಾರ ಮೂಲದ ಶಂಕಿತ ನಕ್ಸಲ್ ತಲೆಮರಿಸಿಕೊಳ್ಳಲು ರಾಯಚೂರು ಜಿಲ್ಲೆ ಆಸರೆಯನ್ನಾಗಿಸಿಕೊಂಡನೇ? ಇಲ್ಲವೇ ದುಡಿಯಲು ಬಂದಿದ್ದಾನೆಯೇ ಎನ್ನುವ ಹೊಸ ತಲೆನೋವು ಶುರುವಾಗಿದ್ದು, ಸತ್ಯಾಸತ್ಯತೆಯು ಹೆಚ್ಚಿನ ತನಿಖೆ ಹೊರಬೀಳಬೇಕಾಗಿದೆ.

----------------

ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಿಹಾರ ರಾಜ್ಯದ ಪೊಲೀಸರು ಶಂಕಿತ ನಕ್ಸಲ್‌ ಮನೋಜ ಸದಾನನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ ಅವರೆಲ್ಲರ ಬ್ಯಾಕ್‌ಗ್ರೌಂಡ್‌ ಚೆಕ್‌ ಮಾಡಲು ಕ್ರಮ ವಹಿಸಲಾಗುವುದು.

- ಎಂ.ಪುಟ್ಟಮಾದಯ್ಯ, ಎಸ್ಪಿ, ರಾಯಚೂರು