ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಹತ್ತು ಕುರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇನ್ನೂ ಮೂರು ಕುರಿಗಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಮಹದೇವಮ್ಮ ಹಾಗೂ ದೇವಮ್ಮಗೆ ಸೇರಿದ ಹತ್ತು ಕುರಿಗಳು ವಿಷ ಪೂರಿತ ಸೊಪ್ಪು ಅಥವಾ ಬೀಜ ತಿಂದು ಸತ್ತಿರಬಹುದು ಎಂದು ಹೇಳಲಾಗುತ್ತಿದೆ.ಜಮೀನಿನಲ್ಲಿ ಮಧ್ಯಾಹ್ನದ ತನಕ ಚೆನ್ನಾಗಿಯೇ ಮೇಯುತ್ತಿದ್ದ ಕುರಿಗಳು ಸಂಜೆ ಆಗುತ್ತಿದ್ದಂತೆ ಕುರಿಗಳು ಒಂದೊಂದು ಸ್ವಲ್ಪ ಸಮಯ ಬಿಟ್ಟು ಸತ್ತರೆ,ಇನ್ನೂಳಿದ ಮೂರು ಕುರಿಗಳು ಅಸ್ವಸ್ಥಗೊಂಡಿವೆ. ಕುರಿಗಳ ಸಾವಿನ ವಿಚಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಮೋಹನ್ ಕುಮಾರ್ ಗಮನಕ್ಕೆ ಬಂದಾಗ ಅಸ್ವಸ್ಥಗೊಂಡ ಮೂರು ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಅಸ್ವಸ್ಥ ಮೂರು ಕುರಿಗಳು ಸಾವು,ನೋವಿನ ನಡುವೆ ನರಳುತ್ತಿವೆ ಎಂದು ಕುರಿಗಳನ್ನು ಕಳೆದುಕೊಂಡ ಮಹದೇವಮ್ಮ ಹಾಗು ರತ್ನಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಮೋಹನ್ ಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ ವಿಷ ಪೂರಿತ ಆಹಾರ ಸೇವಿಸಿ ಹತ್ತು ಕುರಿಗಳು ಸಾವನ್ನಪ್ಪಿವೆ ಎಂದರು.ಸತ್ತ ಕುರಿಗಳ ಶವ ಪರೀಕ್ಷೆ ಶನಿವಾರ ನಡೆಸಿದ ಬಳಿಕ ಸತ್ತ ಕುರಿಗೆ ತಲಾ ಐದು ಸಾವಿರ ಪರಿಹಾರ ನೀಡಲು ಕ್ರಮ ವಹಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.ನೆರವಿಗೆ ಆಗ್ರಹ: ಅನುಮಾನಸ್ಪದವಾಗಿ ಸಾವನ್ನಪ್ಪಿದ ಕುರಿಗಳನ್ನು ಕಳೆದುಕೊಂಡ ಮಹದೇವಮ್ಮ ಹಾಗು ದೇವಮ್ಮ ಕುರಿಗಳನ್ನೇ ಸಾಕಿ ಜೀವನ ನಡೆಸುತ್ತಿದ್ದಾರೆ.ಸರ್ಕಾರ ಕೂಡಲೇ ಪರಿಹಾರ ನೀಡುವ ಜೊತೆಗೆ ಕುರಿಗಳನ್ನು ಮಾನವೀಯತೆ ದೃಷ್ಟಿಯಿಂದ ವಿತರಿಸಬೇಕು ಎಂದು ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ.
ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಹತ್ತು ಕುರಿಗಳು ಸಾವನ್ನಪ್ಪಿವೆ. ಕುರಿಗಳ ಮರಣೋತ್ತರ ಪರೀಕ್ಷೆ ಬಳಿಕ ಪರಿಹಾರ ವಿತರಣೆಗೆ ಕ್ರಮ ತಗೆದುಕೊಳ್ಳಲಾಗುವುದು.ಇನ್ನೂ ಮೂರು ಕುರಿಗಳು ಅಸ್ವಸ್ಥಗೊಂಡಿವೆ.ಪ್ರಥಮಚಿಕಿತ್ಸೆ ನೀಡಲಾಗಿದೆ.-ಡಾ.ಬಿ.ಎಚ್.ಮೋಹನ್ ಕುಮಾರ್,ಸಹಾಯಕ ನಿರ್ದೇಶಕ,ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ,ಗುಂಡ್ಲುಪೇಟೆ