ಕಲಬುರಗಿ: ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಪುಸ್ತಕ ಬಿಡುಗಡೆ

| Published : Jan 06 2024, 02:00 AM IST

ಕಲಬುರಗಿ: ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಪುಸ್ತಕ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಒಡಿಸ್ಸಾದ ಭುವನೇಶ್ವರದಲ್ಲಿರುವ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಆರ್ಥಿಕ ಸಂಘದ 106ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಆರ್.ಆರ್. ಬಿರಾದಾರ್ ಅವರು ರಚಿಸಿರುವ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಕುರಿತ ಪುಸ್ತಕವನ್ನು ವಿಐಟಿ ವೆಲ್ಲೂರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ವಿಶ್ವನಾಥನ್ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಆಳಂದ

ಒಡಿಸ್ಸಾದ ಭುವನೇಶ್ವರದಲ್ಲಿರುವ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಆರ್ಥಿಕ ಸಂಘದ 106ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಆರ್.ಆರ್. ಬಿರಾದಾರ್ ಅವರು ರಚಿಸಿರುವ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಕುರಿತ ಪುಸ್ತಕವನ್ನು ವಿಐಟಿ ವೆಲ್ಲೂರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ವಿಶ್ವನಾಥನ್ ಬಿಡುಗಡೆ ಮಾಡಿದರು.

ಈ ವೇಳೆ ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ ಸಂಪಾದಕ ಡಾ. ಮಹೇಂದ್ರ ದೇವ್, ಭಾರತೀಯ ಆರ್ಥಿಕ ಸಂಘದ ಅಧ್ಯಕ್ಷ ಡಾ.ತಪನಕುಮಾರ್ ಸಂಡಿಯಾಲ್‌ ಪ್ರೊ. ಆರ್.ಆರ್. ಬಿರಾದಾರ್ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ ಬಳಿಕ ಪ್ರೊ. ಬಿರಾದಾರ್‌ ಮಾತನಾಡಿ, “ಪುಸ್ತಕವು ಗ್ರಾಮೀಣ ಕೃಷಿಯೇತರ ಚಟುವಟಿಕೆಗಳಲ್ಲಿ (ಆರ್‌ಎನ್‍ಎಫ್‍ಎ) ಕೆಲಸ ಮಾಡುವ ಕಾರ್ಮಿಕರ ಔದ್ಯೋಗಿಕ ಬದಲಾವಣೆ ವಿವರಿಸುತ್ತದೆ ಮತ್ತು ಬಡತನ, ಆದಾಯದ ಅಸಮಾನತೆ ಮತ್ತು ಗ್ರಾಮೀಣ ಕೃಷಿಯೇತರ ಜೀವನ ಪರಿಸ್ಥಿತಿಗಳ ಮೇಲೆ ಅವುಗಳ ಪ್ರಭಾವವನ್ನು ಪರಿಶೀಲಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಸಂದರ್ಭದಲ್ಲಿ ಈ ಪುಸ್ತಕವು ದೇಶದ ಗ್ರಾಮೀಣ-ನಗರವಾಸಿಗಳ ಜನಸಂಖ್ಯೆ ಮತ್ತು ಸಾಕ್ಷರತೆ, ಆರೋಗ್ಯದ ಸ್ಥಿತಿ, ಆರ್ಥಿಕತೆ, ಜೀವನ ಮಟ್ಟದಲ್ಲಿನ ಅಸಮಾನತೆಯನ್ನು ಸಹ ಪರಿಶೀಲಿಸುತ್ತದೆ.

ಇದು ಭಾರತದಲ್ಲಿನ ಗ್ರಾಮೀಣ ಆರ್ಥಿಕತೆಯ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಭಾವ್ಯ ತೊಂದರೆಗಳನ್ನು ಗುರುತಿಸುತ್ತದೆ ಮತ್ತು ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗಾಗಿ ಗ್ರಾಮೀಣ-ನಗರ ಸಂಪರ್ಕಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಇದು ಭಾರತ ಮತ್ತು ಕರ್ನಾಟಕದಲ್ಲಿನ ಗ್ರಾಮೀಣ ಕೃಷಿಯೇತರ ಚಟುವಟಿಕೆಗಳ ಪ್ರವೃತ್ತಿಗಳು ಮತ್ತು ಮಾದರಿಗಳನ್ನು ಮತ್ತು ಅವುಗಳ ಬೇಳವಣಿಗೆಗೆ ಕಾರಣವಾದ ಅಂಶಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ. ಪುಸ್ತಕವು ಗ್ರಾಮೀಣ ಕೃಷಿಯೇತರ ಚಟುವಟಿಕೆಗಳ ಬೆಳವಣಿಗೆಯ ಪ್ರಕ್ರಿಯೆಯನ್ನು ವಿವರಿಸುತ್ತದೆ ಮತ್ತು ಜಾಗತೀಕರಣದ ಯುಗದಲ್ಲಿ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯತಂತ್ರಗಳು ಮತ್ತು ನೀತಿಗಳನ್ನು ರೂಪಿಸಲು ಸಲಹೆಗಳನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ವಿಐಟಿ ವಿಶ್ವವಿದ್ಯಾಲಯ ವೆಲ್ಲೂರಿನ ಕುಲಪತಿ ಪ್ರೊ. ಜಿ.ವಿಶ್ವನಾಥನ್ ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, “ಪುಸ್ತಕವು ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸಮಗ್ರ ಚಿತ್ರಣವನ್ನು ನೀಡುತ್ತದೆ. ಪುಸ್ತಕವು ಕ್ಷೇತ್ರ ಸಂಶೋಧನೆಯನ್ನು ಆಧರಿಸಿರುವುದರಿಂದ, ಇದು ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ವಾಸ್ತವಿಕ ಮತ್ತು ಸಮಕಾಲೀನ ಚಿತ್ರವನ್ನು ನೀಡುತ್ತದೆ. ಗ್ರಾಮೀಣ ಆರ್ಥಿಕತೆ, ಕೈಗಾರಿಕೆಗಳು, ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸಮಾಡುವವರು, ಶಿಕ್ಷಣ ತಜ್ಞರು, ಸಂಶೋಧಕರು, ಗ್ರಾಮೀಣ ಮಾರುಕಟ್ಟೆದಾರರು ಮತ್ತು ವಿಶೇಷವಾಗಿ ನೀತಿ ನಿರೂಪಕರಿಗೆ ಇದು ಉತ್ತಮ ಪುಸ್ತಕವಾಗಿದೆ. ಗ್ರಾಮೀಣ ಆರ್ಥಿಕತೆಯ ಬಗ್ಗೆ ಆಸಕ್ತಿ ಇರುವವರು ಇದನ್ನು ಓದಬೇಕು ಎಂದು ನಾನು ಸಲಹೆ ನೀಡುತ್ತೇನೆ” ಎಂದು ಹೇಳಿದರು.