ಸಾರಾಂಶ
ಸುತ್ತೂರು ಶ್ರೀಗಳ ಶೈಕ್ಷ ಣಿಕ ಸೇವೆ ಕುರಿತು ವಿಶೇಷ ಉಪನ್ಯಾಸ
ಕನ್ನಡಪ್ರಭ ವಾರ್ತೆ ಬಳ್ಳಾರಿಸುತ್ತೂರು ಮಠವು ಶಿಕ್ಷಣ, ಕೃಷಿ, ಸಾಮಾಜಿಕ ಕಲ್ಯಾಣ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದು, ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕ ಡಾ. ಸಿ. ಕೊಟ್ರೇಶ್ ಹೇಳಿದರು.
ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣೆ, ಸಂಸ್ಥಾಪಕರ ದಿನಾಚರಣೆ ಹಾಗೂ ಸೇವಾದೀಕ್ಷೆ ಸಮಾರಂಭದಲ್ಲಿ ಸುತ್ತೂರು ಶ್ರೀಗಳ ಶೈಕ್ಷ ಣಿಕ ಸೇವೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಚೋಳರ ಕಾಲಘಟ್ಟದಲ್ಲಿ ಶಿವರಾತ್ರೀಶ್ವರರ ಸುತ್ತೂರು ಮಠ ಸ್ಥಾಪನೆ ಆಗುತ್ತದೆ. ಚೋಳ ಮತ್ತು ಗಂಗರ ನಡುವೆ ನಡೆದ ಯುದ್ಧವನ್ನು ನಿಲ್ಲಿಸಲು ಸಹ ಈ ಮಠ ಕಾರಣವಾಗುತ್ತದೆ.
ಮಠದ 23ನೇ ಶ್ರೀಗಳಾದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಜೆಎಸ್‌ಎಸ್ ವಿದ್ಯಾಪೀಠ ಸ್ಥಾಪನೆ ಮಾಡಿದರು. ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಮಠ ಇಂದು ರಾಜ್ಯದಲ್ಲಿ ಮಹತ್ತರವಾದ ಶೈಕ್ಷಣಿಕ ಕ್ರಾಂತಿ ಮಾಡಿದೆ. ಶಿಕ್ಷಣದ ಮಹತ್ವವನ್ನು ಅರಿತು ಶ್ರೀಗಳು ಐದು ದಶಕಗಳ ಕಾಲ ಶ್ರಮಿಸಿದರು. ಅನೇಕ ಸಮುದಾಯಗಳನ್ನು ಮಠದ ಕಡೆ ಸೆಳೆಯುವ ಕೆಲಸ ಅವರಿಂದ ನಡೆಯಿತು. ಅವರಲ್ಲಿನ ತ್ಯಾಗದ ಮನೋಭಾವದಿಂದ ಸಮಾಜದ ಅಭಿವೃದ್ದಿ ಹರಿಕಾರರಾದರು ಎಂದು ತಿಳಿಸಿದರು.ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಾಡಿನ ಅನೇಕ ಮಠಮಾನ್ಯಗಳು ಅನ್ನ, ಆಶ್ರಯ ಹಾಗೂ ಅಕ್ಷರ ದಾಸೋಹದ ಮೂಲಕ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಶುರುಗೊಳಿಸಿದವು. ಮಠ ಮಾನ್ಯಗಳ ಜನಮುಖಿ ಕಾಳಜಿಯಿಂದಾಗಿಯೇ ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ವೀರಶೈವ ಮಠ ಮಾನ್ಯಗಳಿಗೆ ಉಚಿತವಾಗಿ ಶಿಕ್ಷಣ ಪಡೆಯುವಂತಾಗಿದೆ. ಮೈಸೂರಿನ ಸುತ್ತೂರುಮಠವು ಸಹ ಅಕ್ಷರ ದಾಸೋಹ ಕಾಯಕದಲ್ಲಿ ಮೊದಲ ಪಂಕ್ತಿಯಲ್ಲಿದೆ. ಎಲ್ಲ ಸಮುದಾಯಗಳು ಶೈಕ್ಷಣಿಕ ಮುನ್ನಲೆಗೆ ಬರಬೇಕು ಎಂಬ ಮಠದ ಶ್ರೀಗಳ ಕಾಳಜಿ ಹಾಗೂ ದೂರದೃಷ್ಟಿಯ ಫಲವಾಗಿ ಸುತ್ತೂರುಮಠ ಜನಸಮುದಾಯಗಳ ಮಠ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಸ್ಮರಿಸಿದರು.
ಸಾನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಶ್ರೀ ಕಲ್ಯಾಣ ಸ್ವಾಮಿಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಸುತ್ತೂರುಮಠ ನೀಡಿದ ಕೊಡುಗೆಯನ್ನು ಸ್ಮರಿಸಿದರು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ ಸಮಾರಂಭಕ್ಕೆ ಚಾಲನೆ ನೀಡಿದರು. ಇದೇ ವೇಳೆ ಸಾವಯವ ಕೃಷಿಕ ಬಿ.ಎಂ. ವೀರಪ್ಪಯ್ಯ, ನೃತ್ಯ ಕಲಾವಿದ ಜಿಲಾನ್ ಭಾಷಾ, ರಂಗ ಕಲಾವಿದೆ ಜಯಶ್ರೀ ಪಾಟೀಲ್, ಸಮಾಜ ಸೇವಕ ಚಂದ್ರಶೇಖರಗೌಡ ಮಸೀದಿಪುರ, ಪತ್ರಕರ್ತ ಎನ್.ವೀರಭದ್ರಗೌಡ, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರನ್ನು ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಕಾರ್ಯ ಚಟುವಟಿಕೆ ತಿಳಿಸಿದರು. ಉಪನ್ಯಾಸಕಿ ಡಿ. ಸುಮ, ಎ.ಎಂ.ಪಿ ವೀರೇಶ್ ಸ್ವಾಮಿ ಹಾಗೂಕಾಲೇಜಿನ ಪ್ರಾಂಶುಪಾಲ ಶ್ರೀಶೈಲಗೌಡ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಕನ್ನಡಪರ ಮುಖಂಡ ಸಂಗನಕಲ್ಲು ಹಿಮಂತರಾಜ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಬಾಣಾಪುರ ಜಡೇಸಿದ್ದನಗೌಡ, ಕರ್ನಾಟಕ ಯುವಕ ಸಂಘದ ಮಾಜಿ ಅಧ್ಯಕ್ಷ ವಿಭೂತಿ ಎರ್ರಿಸ್ವಾಮಿ ಇದ್ದರು. ಕೊನೆಯಲ್ಲಿ ಶರಣ ಸಾಹಿತ್ಯ ಪರಿಷತ್ ನೂತನ ಕಾರ್ಯಕಾರಿ ಮಂಡಳಿಗೆ ಚಾಲನೆ ನೀಡಲಾಯಿತು.
;Resize=(128,128))
;Resize=(128,128))