ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶಕ್ತಿಪೀಠ ಸುತ್ತೂರು ಶ್ರೀಮಠ. ರಾಜೇಂದ್ರ ಶ್ರೀಗಳು ಬಿತ್ತಿದ ಬೀಜ ಇಂದು ಬೃಹತ್ತ ಹೆಮ್ಮರವಾಗಿ ಬೆಳೆದು ದೇಶವಿದೇಶಗಳಿಗೂ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ. ಹಿರಿಯ ನಾಗರಿಕರು ಸಮಾಜದ ಆಸ್ತಿ. ಶ್ರೀಮಠ ನಿರ್ಮಿಸಿರುವ ಈ ಹಿರಿಯರ ಮನೆಯು ಅವರಿಗೆ ನೆಮ್ಮದಿ ನೀಡುವ ಆಶ್ರಯ ತಾಣವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸುತ್ತೂರು ಶ್ರೀಮಠವು ಸೇವಾಕಾರ್ಯಗಳ ಮೂಲಕ ಲಕ್ಷಾಂತರ ಜನರ ಜೀವನ ಬೆಳಗುತ್ತಿರುವ ಬೃಹತ್ ಆಲದಮರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಮಕೃಷ್ಣನಗರದ ವಾಸು ಬಡಾವಣೆಯಲ್ಲಿ ನಿರ್ಮಿಸಿರುವ ಜೆಎಸ್‌ಎಸ್ ಹಿರಿಯರ ಮನೆ ಹಾಗೂ ಶಿವ ದೇವಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶಕ್ತಿಪೀಠ ಸುತ್ತೂರು ಶ್ರೀಮಠ. ರಾಜೇಂದ್ರ ಶ್ರೀಗಳು ಬಿತ್ತಿದ ಬೀಜ ಇಂದು ಬೃಹತ್ತ ಹೆಮ್ಮರವಾಗಿ ಬೆಳೆದು ದೇಶವಿದೇಶಗಳಿಗೂ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ. ಹಿರಿಯ ನಾಗರಿಕರು ಸಮಾಜದ ಆಸ್ತಿ. ಶ್ರೀಮಠ ನಿರ್ಮಿಸಿರುವ ಈ ಹಿರಿಯರ ಮನೆಯು ಅವರಿಗೆ ನೆಮ್ಮದಿ ನೀಡುವ ಆಶ್ರಯ ತಾಣವಾಗಲಿದೆ ಎಂದರು.

ಜೀವನದ ಸಂಧ್ಯಾಕಾಲದಲ್ಲಿ ಆರೋಗ್ಯಯುತವಾದ ಜೀವನ ನಡೆಸಲು ಸಹಕಾರಿಯಾಗಲಿದೆ. ಆರ್ಥಿಕವಾಗಿ ಅನುಕೂಲವಿದ್ದವರಿಗೆ ಮಾತ್ರವಲ್ಲದೇ ಬಡವರಿಗೂ ಸಂತೋಷದ ಜೀವನ ಸಾಗಿಸಲು ಪೂಜ್ಯರು ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ಸಾವಿರಾರು ಸಮಾಜಮುಖಿ ಕಾರ್ಯಗಳ ಮೂಲಕ ಪೂಜ್ಯರು ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀಮಠದ ಮೂಲಕ ನಿರಂತರವಾಗಿ ಮಾಡುತ್ತಿರುವುದಾಗಿ ಅವರು ತಿಳಿಸಿದರು.

ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಾಜೇಂದ್ರ ಶ್ರೀಗಳು ಜೆಎಸ್‌ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ ಶ್ರೀಮಠದ ಸೇವಾಕ್ಷೇತ್ರವನ್ನು ವಿಸ್ತರಿಸಿದರು. ವೃದ್ಧಾಶ್ರಮಗಳ ಕುರಿತು ಸಮಾಜದಲ್ಲಿ ನಿರಂತರವಾಗಿ ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇನ್ನೊಬ್ಬರ ಆಶ್ರಯ ಬಯಸದೇ ಸ್ವತಂತ್ರವಾಗಿ ಜೀವಿಸಲು ಹಿರಿಯರು ಬಯಸುತ್ತಾರೆ. ಹಿರಿಯರಿಗಾಗಿಯೇ ನಿರ್ಮಿಸಿರುವ ಈ ಕಟ್ಟಡ ಅವರದೇ ಮನೆ ಇದ್ದಂತೆ ಎಂದು ಅವರು ಕೊಂಡಾಡಿದರು.

ಅದಕ್ಕಾಗಿಯೇ ಇದಕ್ಕೇ ಹಿರಿಯರ ಮನೆ ಎಂದು ಕರೆಯಲಾಗಿದೆ. ಉಳ್ಳವರಿಗೂ ಮತ್ತು ಇಲ್ಲದವರಿಗೂ ಇಲ್ಲಿ ಒಂದೇ ರೀತಿಯ ಸೌಲಭ್ಯವಿರುತ್ತದೆ. ವೆಚ್ಚ ಭರಿಸಲು ಸಾಧ್ಯವಾಗದರಿಗೆ ಉಚಿತವಾದ ಸೌಲಭ್ಯವನ್ನು ನೀಡಲಾಗುತ್ತದೆ. ಮನೆಯಲ್ಲಿರುವ ಎಲ್ಲಾ ಸೌಕರ್ಯಗಳು ಇಲ್ಲಿರುತ್ತವೆ ಎಂದು ತಿಳಿಸಿದರು.

ಶ್ರೀಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಮಾಧವ ಸೇವೆಗಿಂತಲೂ ಮುಖ್ಯವಾದುದ್ದು ಮಾನವ ಸೇವೆ. ಶಿಕ್ಷಣ, ಆರೋಗ್ಯ, ಅನ್ನ ದಾಸೋಹಗಳ ಮೂಲಕ ಸುತ್ತೂರು ಶ್ರೀಮಠ ನಾಡಿನ ತುಂಬೆಲ್ಲಾ ತನ್ನ ಸೇವಾಕಾರ್ಯ ವಿಸ್ತರಿಸಿದೆ. ಎಲ್ಲವೂ ಭಗವಂತನ ಇಚ್ಚೆಯಂತೆ ನಡೆಯುತ್ತಿರುತ್ತದೆ ಎಂದರು.

ಹಿರಿಯ ಜೀವಗಳಿಗಾಗಿ ಸುತ್ತೂರು ಶ್ರೀಮಠ ಅದ್ಭುತವಾದ ಕಾರ್ಯವನ್ನು ಮಾಡಿದೆ. ಇದರಿಂದ ಇಳಿವಯಸ್ಸಿನಲ್ಲಿ ಅವರು ಸುಖವಾಗಿ ಜೀವನ ಸಾಗಿಸಬಹುದು. ನಮಗೆ ರಾಜೇಂದ್ರ ಶ್ರೀಗಳೊಂದಿಗೆ ಅನ್ಯೋನ್ಯವಾದ ಸಂಬಂಧವಿತ್ತು ಎಂದು ಸ್ಮರಿಸಿದರು.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ಸುತ್ತೂರು ಶ್ರೀಮಠದಿಂದ ನಿರ್ಮಿಸಿರುವ ಹಿರಿಯರ ಮನೆಯು ಒಂದು ಮಾದರಿ ಕಾರ್ಯ. ಇಲ್ಲಿಯೇ ಶಿವ ದೇವಾಲಯವನ್ನು ನಿರ್ಮಿಸಿರುವುದು ಸಹ ಔಚಿತ್ಯಪೂರ್ಣವಾಗಿದೆ. ಕಾಶಿಯ ಪರಿಸರ ಇಲ್ಲೇ ನಿರ್ಮಾಣವಾಗಿದೆ ಎಂದರು.

ಕನಕಪುರ ಶ್ರೀ ದೇಗುಲಮಠದ ಡಾ. ಶ್ರೀ ಚನ್ನಬಸವ ಸ್ವಾಮಿಗಳವರು ಸುತ್ತೂರು ಶ್ರೀಮಠ ಸಮಾಜ ಬಯಸುವ ಎಲ್ಲಾ ಸೇವೆಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಇದಕ್ಕೆಲ್ಲ ರಾಜೇಂದ್ರ ಶ್ರೀಗಳು ಪ್ರೇರಣೆ ಜೊತೆಗೆ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ವಾತ್ಸಲ್ಯಪೂರ್ಣ ಮಮತೆಯುಳ್ಳ ಅಂತಃಕರಣವೂ ಕಾರಣವಾಗಿದೆ ಎಂದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಸುತ್ತೂರು ಶ್ರೀಮಠ ಜಾತಿ ಮತ ಪಂಥಗಳ ಬೇಧ ಮಾಡದೇ ಎಲ್ಲರಿಗೂ ನಿರಂತರವಾದ ಸೇವೆಯನ್ನು ಸಲ್ಲಿಸುತ್ತಿದೆ. ಈ ಹಿರಿಯರ ಮನೆಯು ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯ ನೀಡುವ ತಾಣವಾಗಲಿದೆ ಎಂದರು.

ಮಾಜಿ ಸಚಿವೆ ರಾಣಿ ಸತೀಶ್‌ ಅವರು ಕೊಡುಗೆ ನೀಡಿರುವವರ ಭಾವಚಿತ್ರಗಳನ್ನು ಅನಾವರಣಗೊಳಿಸಿ ಸುತ್ತೂರು ಶ್ರೀಮಠ ಈ ಹಿರಿಯರ ಮನೆಯು ಅವರ ಬದುಕಿಗೆ ಹೊಸ ಬೆಳಕು ನೆಮ್ಮದಿ ಮತ್ತು ಶಾಂತಿ ನೀಡುವ ತಾಣವಾಗಲಿದೆ ಎಂದರು.

ಈ ವೇಳೆ ಕೊಡುಗೆ ನೀಡಿದವರಿಗೆ, ಆರ್ಕಿಟೆಕ್ಟ್ ಹಾಗೂ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಂದೇಶ ವಾಚಿಸಿದರು. ಜೆಎಸ್‌ಎಸ್ ಲಲಿತಕಲಾ ವೃಂದದವರು ಪ್ರಾರ್ಥಿಸಿದರು. ಎಸ್. ಬಸವರಾಜು ವಂದಿಸಿದರು. ಎಂ.ಪಿ. ಪುಷ್ಪಲತಾ ನಿರೂಪಿಸಿದರು.