ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಯುವಕರ ಬದುಕು ಮೌಲ್ಯಯುತವಾಗಿರಬೇಕು ಎಂದು ಕಾವಾದ ಆಡಳಿತಾಧಿಕಾರಿ ನಿರ್ಮಲಾ ಮಠಪತಿ ಹೇಳಿದರು.ಸುತ್ತೂರು ಶ್ರೀ ಕ್ಷೇತ್ರದಲ್ಲಿ ಯುವಜನರ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಯುವಕರು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವ್ಯಕ್ತಿಗತವಾಗಿ ಮತ್ತು ಸಮಾಜದ ಹಿತದೃಷ್ಟಿಯಿಂದ ಬಹಳ ಮುಖ್ಯ. ಮನಸ್ಸಿನ ವಿಕಾರಗಳಿಗೆ ಉತ್ತಮ ಸಂಸ್ಕಾರಗಳೇ ಪರಮೌಷಧಿ. ಮೌಲ್ಯಯುತ ಶಿಕ್ಷಣವನ್ನು ಪಡೆದು ಪರಸ್ಪರ ಗೌರವ, ಸಹಕಾರ ಮತ್ತು ಸಹಿಷ್ಣುತೆಯ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಯುವಕರು ಜೀವನದಲ್ಲಿ ಮಹತ್ವಕಾಂಕ್ಷೆಗಳನ್ನು ಸಾಧಿಸಲು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಶಿಬಿರದಲ್ಲಿ ಪಾಲ್ಗೊಂಡಿರುವ ನಿಮಗೆ ಮೌಲಿಕ ಉಪನ್ಯಾಸಗಳ ಜೊತೆಗೆ ಉತ್ತಮ ಸಂಸ್ಕಾರವು ಲಭಿಸುತ್ತದೆ ಎಂದು ಅವರು ಹೇಳಿದರು. ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಎಂ. ಲೇಖನ್ ಅವರು ಒಳ್ಳೆಯ ವಿಷಯಗಳನ್ನು ಪಡೆದುಕೊಳ್ಳಲು ಶಿಬಿರಗಳು ಹೆಚ್ಚು ಸಹಕಾರಿಯಾಗಲಿವೆ. ಜೀವನದಲ್ಲಿ ಸೋಲು ಕಂಡರೂ ಉತ್ಸಾಹ ಕಳೆದುಕೊಂಡು ಖಿನ್ನತೆಗೊಳಗಾಗಬಾರದು. ಸತತ ಪರಿಶ್ರಮದಿಂದ ಶಿಸ್ತನ್ನು ರೂಢಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು. ಅಂಕಗಳನ್ನು ಗಳಿಸುವುದಕ್ಕಿಂತ ವಿಷಯಗಳನ್ನು ತಿಳಿದುಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು. ವಿವೇಕ ವಿದ್ಯಾವಾಹಿನಿಯ ಶ್ರೀ ನಿತ್ಯಾನಂದ ವಿವೇಕವಂಶಿ ಅವರು ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವವಿದೆ. ಜ್ಞಾನದಿಂದ ಆಧ್ಯಾತ್ಮಿಕತೆಯ ಅನುಭವಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ವೇದಗಳು, ಉಪನಿಷತ್ತುಗಳು, ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತೀಯ ಸಂಸ್ಕೃತಿಯು ಆತ್ಮ ತತ್ವದ ಮೇಲೆ ನಿಂತಿದೆ. ಸ್ನೇಹ ಮತ್ತು ತ್ಯಾಗವೇ ಜೀವನದ ಪರಮ ಗುರಿಯಾಗಬೇಕು ಎಂದು ತಿಳಿಸಿದರು. ಯುವವಾಗ್ಮಿಗಳಾದ ಹಾರಿಕ ಮಂಜುನಾಥ್ ಮಾತನಾಡಿ, ರಾಷ್ಟ್ರಪ್ರೇಮ ಸ್ವಾಭಿಮಾನದಿಂದ ಹುಟ್ಟುತ್ತದೆ. ರಾಷ್ಟ್ರದ ಏಳಿಗೆಗಾಗಿ ಸರ್ವರೂ ಶ್ರಮಿಸಬೇಕು. ಭಾರತವು ಜಗತ್ತಿಗೆ ವಿಶ್ವಮಾತೆಯಾಗಿ ಅಗಾಧ ಜ್ಞಾನ ಸಂಪತ್ತನ್ನು ನೀಡಿದೆ ಎಂದರು.ಶಿಬಿರಾರ್ಥಿಗಳಾದ ಎಸ್. ಹರ್ಷಿತ, ಕೆ.ಎನ್. ವಿಜಯಲಕ್ಷ್ಮಿ, ಎಲ್.ಎಲ್. ಚಂದ್ರಶೇಖರ್, ಬಿ. ಮೌನ, ಎನ್. ರಕ್ಷಿತಾ, ಎಂ. ದರ್ಶಿನಿ ಮತ್ತು ಆರ್. ನಿಂಗರಾಜು ಅವರು ಅನಿಸಿಕೆಗಳನ್ನು ಹಂಚಿಕೊಂಡರು. ಬಿ. ಸುಸ್ಮಿತಾ ಶಿಬಿರದ ವರದಿ ಮಂಡಿಸಿದರು. ಎನ್.ಎಸ್. ಮಾನಸ ಪ್ರಾರ್ಥಿಸಿದರು. ಎನ್. ಸಿಂಧು ಸ್ವಾಗತಿಸಿದರು. ಬಿ. ನಿರಂಜನಮೂರ್ತಿ ವಂದಿಸಿದರು. ಅನುಷ ಕಾರ್ಯಕ್ರಮ ನಿರೂಪಿಸಿದರು.