ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಿದ್ಯುನ್ಮಾನ ಮಾಧ್ಯಮ ಹಾಗೂ ಹೊಸ ರೀತಿಯ ಕಲೆಗಳು ಬಂದ ಮೇಲೆ ರಂಗಭೂಮಿ ಹಲವು ಸವಾಲು ಎದುರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹಾಗೂ ನಟಿ ಉಮಾಶ್ರೀ ತಿಳಿಸಿದರು.ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ: ನಾಟಕ- 50 ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಗೀತ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಪೀಳಿಗೆಯನ್ನು ರಂಗಭೂಮಿ ಕಡೆಗೆ ಬರುವಂತೆ ಮಾಡಲು ಹೊಸ ತಂತ್ರ ಅನುಸರಿಸಬೇಕು. ರಂಗಭೂಮಿ ಆರಂಭದಿಂದಲೂ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದೆ. ಸಂಗೀತ, ನಾಟಕ, ಜಾನಪದ ಕಲೆ ಬೇರೆ ಬೇರೆಯಲ್ಲ. ಈ ಎಲ್ಲಾ ಪ್ರಕಾರವನ್ನು ಒಳಗೊಂಡಿರುವುದೇ ರಂಗಭೂಮಿ. ಕಾಲ ಕಾಲಕ್ಕೆ ತನ್ನ ಸ್ವರೂಪ ಬದಲಿಸಿಕೊಂಡು ತನ್ನ ಆಯಾಮ ಬದಲಿಸಿಕೊಂಡಿದೆ ಎಂದು ಅವರು ಹೇಳಿದರು.ನಾವು ಬೇರೆಯವರನ್ನು ನೋಡಿ ಹೋರಾಟದ ಮೂಲಕ ಬಂದವರು. ಹೊಸ ಪೀಳಿಗೆಯು ಛಲ, ಹಠದಿಂದ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜಮುಖಿ ಚಿಂತನೆ ಮಾಡಬೇಕು. ರಂಗಭೂಮಿಯಲ್ಲಿ ನಮಗಿಂತ ಹೆಚ್ಚು ದುಡಿದವರು, ಕೆಲಸ ಮಾಡಿದವರು ಇದ್ದಾರೆ ಎಂದರು.ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಆಗಿದ್ದಾಗ ರಂಗಭೂಮಿ ಕ್ಷೇತ್ರಕ್ಕೆ ಇದ್ದ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದೆ. ಕಲಾವಿದರ ಪ್ರಶಸ್ತಿ ಮೊತ್ತವನ್ನೂ ಕೂಡ ಹೆಚ್ಚಿಸಿದ್ದೆ. ನಮ್ಮ ಕಾಲದಲ್ಲೂ ನಾಟಕ ಕಲಾವಿದರು ಮತ್ತು ನಾಟಕದ ವಿದ್ಯಾರ್ಥಿಗಳಿಗೆ ಫೆಲೋಷಿಪ್ ನೀಡಲಾಗಿದೆ ಎಂದು ಅವರು ಹೇಳಿದರು.ಸಂಗೀತ ವಿವಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಸ್ವಂತ ಕಟ್ಟಡ ಸೇರಿದಂತೆ ಎಲ್ಲಾ ವಿಷಯದಲ್ಲಿಯೂ ಕುಲಪತಿ ಒಬ್ಬರಿಂದಲೇ ಸಾಧ್ಯವಿಲ್ಲ. ಈ ಸಂಬಂಧ ಎಲ್ಲರೂ ಧ್ವನಿ ಎತ್ತಬೇಕು ಎಂದರು.ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿವಿ ಕುಲಪತಿ ಡಾ. ನಾಗೇಶ ವಿ. ಬೆಟ್ಟಕೋಟೆ, ಪ್ರಭಾರ ಕುಲಸಚಿವೆ ಕೆ.ಎಸ್. ರೇಖಾ, ರಂಗಕರ್ಮಿ ಸಿ. ಬಸವಲಿಂಗಯ್ಯ, ವಿಮರ್ಶಕ ಜಿ.ಎನ್. ಮೋಹನ್ ಮೊದಲಾದವರು ಇದ್ದರು.