ಸಾರಾಂಶ
ಕೊಪ್ಪಳ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಡಿ. 10ರಂದು ಬೆಳಗಾವಿ ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್‌ಗಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡಬೇಕು ಎನ್ನುವ ಬಹು ವರ್ಷಗಳ ಬೇಡಿಕೆಗೆ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸದೆ ಕೇವಲ ಮುಂದೂಡುವ ತಂತ್ರ ಅನುಸರಿಸುತ್ತದೆ. ಇದರ ವಿರುದ್ಧ ಈಗಾಗಲೇ ಹಲವಾರು ಹೋರಾಟ ಮಾಡಿದ್ದು, ಇನ್ಮುಂದೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಹೀಗಾಗಿ, ಪಾದಯಾತ್ರೆಯ ನಂತರ ಪ್ರತಿಭಟನೆಯನ್ನು ಅಸ್ತ್ರವಾಗಿ ಬಳಕೆ ಮಾಡಲಾಗುವುದು. ಇದರ ಮೊದಲ ಭಾಗವಾಗಿ ಟ್ರ್ಯಾಕ್ಟರ್‌ಗಳೊಂದಿಗೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿ ಹಾಕಲಾಗುವುದು ಎಂದರು.
ಈ ಸರ್ಕಾರದಲ್ಲಿ ನಮಗೆ ಮೀಸಲಾತಿ ದೊರೆಯುವ ಭರವಸೆ ಇತ್ತು. ಆದರೆ ಎರಡು ವರ್ಷ ಕಳೆಯುತ್ತಾ ಬಂದರೂ ನಮಗೆ ಭರವಸೆ ಸಿಗುತ್ತಿಲ್ಲ. ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ದವಲ್ಲ. ನಮ್ಮ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟಕ್ಕೂ ಮುನ್ನವೇ ಸರ್ಕಾರ ನಿರ್ಣಯಕೈಗೊಂಡರೇ ಉತ್ತಮ ಎಂದರು.
ನಮ್ಮ ಬೇಡಿಕೆಯನ್ನು ಅಷ್ಟಾಗಿ ಪರಿಗಣಿಸುತ್ತಿಲ್ಲ. ಕನಿಷ್ಠ ಪಕ್ಷ ಎಲ್ಲ ಲಿಂಗಾಯತ ಸಮುದಾಯಕ್ಕೆ ಕೇಂದ್ರದಲ್ಲಿ ಓಬಿಸಿಗೆ ಶಿಫಾರಸ್ಸು ಮಾಡಿ ಎಂದೆವು. ಅದನ್ನೂ ಸಹ ಮಾಡುತ್ತಿಲ್ಲ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ನಮೂದು ತೆಗೆಯಲಿ:
ರಾಜ್ಯದ ರೈತರ ಭೂಮಿಗೆ ಅನ್ಯಾಯ ಆದರೆ ನಮ್ಮ ಸಮಾಜ ರೈತರ ಪರ ನಿಲುವು ತಾಳುತ್ತದೆ. ರೈತರ ಆಸ್ತಿ, ಮಠ ಮಾನ್ಯಗಳ ಆಸ್ತಿ ಮೇಲೆ ವಕ್ಫ್ ಆಸ್ತಿ ನಮೂದು ತೆಗೆಯಬೇಕು. ಇಲ್ಲದಿದ್ದರೆ ಇದನ್ನು ನೋಡಿಕೊಂಡು ಸುಮ್ಮನಿರಲು ಆಗುವುದಿಲ್ಲ ಎಂದರು.
ದೊಡ್ಡಬಸಪ್ಪ, ಕರಿಯಪ್ಪ ಮೇಟಿ, ಎಂ ಎಂ ಚಿತ್ತವಾಡಗಿ, ಡಾ. ಶಿವನಗೌಡ, ಕೀರ್ತಿ ಪಾಟೀಲ್ ಇದ್ದರು.