ಮಂಚೀಕೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸುವರ್ಣ ಸ್ಪಂದನ

| Published : Mar 21 2024, 01:01 AM IST

ಸಾರಾಂಶ

೫೦ ವರ್ಷಗಳ ಆನಂತರ ಈ ರೀತಿ ಎಲ್ಲರನ್ನೂ ಒಗ್ಗೂಡಿಸುವುದು ಸುಲಭವಲ್ಲ. ಒಟ್ಟಾರೆ ನಮ್ಮೆಲ್ಲರ ಜೀವನದಲ್ಲಿ ನೆನಪು ಹಸಿರಾಗಿರಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ

ಯಲ್ಲಾಪುರ: ತಾಲೂಕಿನ ಮಂಚೀಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರೌಢಶಾಲೆಯ ೫೦ ವರ್ಷಗಳ ಸವಿನೆನಪಿನ ''''ಸುವರ್ಣ ಸ್ಪಂದನ'''' ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್‌ಎಸ್ಎಲ್‌ಸಿ ೧೯೭೫ನೇ ಸಾಲಿನ ವಿದ್ಯಾರ್ಥಿಗಳ ಕೂಡುವಿಕೆಯ ಅಪರೂಪದ ಸಮಾಗಮ ನಡೆಯಿತು.

ಮುಂಜಾನೆಯಿಂದಲೇ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಮಾತುಕತೆ, ಉಭಯ ಕುಶಲೋಪರಿ, ಮಧ್ಯಾಹ್ನದ ಅವಧಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, ಸ್ವರ್ಣವಲ್ಲೀ ರಾಜರಾಜೇಶ್ವರಿ ನಾಮಾಂಕಿತ ಈ ಪ್ರೌಢಶಾಲೆಯಲ್ಲಿ ಇಂತಹ ಉತ್ಕೃಷ್ಟ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ. ೫೦ ವರ್ಷಗಳ ಆನಂತರ ಈ ರೀತಿ ಎಲ್ಲರನ್ನೂ ಒಗ್ಗೂಡಿಸುವುದು ಸುಲಭವಲ್ಲ. ಒಟ್ಟಾರೆ ನಮ್ಮೆಲ್ಲರ ಜೀವನದಲ್ಲಿ ನೆನಪು ಹಸಿರಾಗಿರಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.

ಲಲಿತಾ ಹೆಗಡೆ ಮತ್ತು ಸಹಪಾಠಿಗಳ ಪ್ರಾರ್ಥಿಸಿದರು. ನಿವೃತ್ತ ಸರ್ಕಾರಿ ಅಧಿಕಾರಿ ಆರ್.ಪಿ. ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಪಿ.ಎಲ್. ಶಾಸ್ತ್ರಿ, ಜಿ.ಟಿ. ಭಟ್ಟ ಬೊಮ್ಮನಳ್ಳಿ, ವಿ.ಜಿ. ಭಟ್ಟ ಹೊಸ್ಮನೆ, ಜಿ.ಟಿ. ಹೆಗಡೆ ಹೊನ್ನಾವರ, ಆರ್.ಜಿ. ಹೆಗಡೆ ಮತ್ತು ಗ್ರಂಥಪಾಲಕ ಶೇಖ್ ಮಂಚೀಕೇರಿ ಅವರನ್ನು ಗೌರವಿಸಲಾಯಿತು. ಅಂದಿನ ಶಿಕ್ಷಕರಾಗಿ ದಿವಂಗತರಾದವರು ಮತ್ತು ಮೃತ ಸಹಪಾಠಿಗಳ ಜೀವಕ್ಕೆ ಚಿರಶಾಂತಿ ಕೋರಿ, ಮೌನಾಚರಣೆ ಮಾಡಲಾಯಿತು.

ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಅಕ್ಷರ ದಾಸೋಹ ಯೋಜನೆಗೆ ೧೯೭೫ನೇ ಸಾಲಿನ ವಿದ್ಯಾರ್ಥಿಗಳು ₹೫೦,೦೦೦ ನೆರವು ನೀಡಿದರು. ಜಯಶ್ರೀ ಪೋಕಳೆ ಎಂಬ ವಿದ್ಯಾರ್ಥಿನಿ ವೈಯಕ್ತಿಕವಾಗಿ ₹೧೦,೦೦೦ ದೇಣಿಗೆ ನೀಡಿದರು. ಹಳೆಯ ವಿದ್ಯಾರ್ಥಿಗಳಾದ ಗಣೇಶ ಹೆಗಡೆ, ಶಿವರಾಮ ಭಟ್ಟ, ಆರ್.ಜೆ. ನಾಯ್ಕ, ರಾಧಾ ಹೆಗಡೆ, ಪಿ.ವಿ. ಹೆಗಡೆ, ಎಂ.ಜಿ. ಭಟ್ಟ, ಪ್ರೇಮಾನಂದ ಫಾಯ್ದೆ, ಪ್ರೌಢಶಾಲಾ ಮುಖ್ಯಾಧ್ಯಾಪಕ ಲೋಕೇಶ ಗುನಗಾ, ಪ್ರಸ್ತುತ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುರುಪ್ರಸಾದ ಭಟ್ಟ ಹೊನ್ನಳ್ಳಿ, ಉಪಾಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ, ಕಾರ್ಯದರ್ಶಿ ನವೀನ ಹೆಗಡೆ ಬೆದೆಹಕ್ಲು, ಕೋಶಾಧ್ಯಕ್ಷ ಸಂತೋಷ ಫಾಯ್ದೆ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿತ್ಲಳ್ಳಿಯ ಕಲಾವಿದ ವೆಂಕಣ್ಣ ಜಾಲೀಮನೆ ಇದೇ ಸಂದರ್ಭದಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದರು. ವಿ.ಎನ್. ಭಾಗ್ವತ ನಿರ್ವಹಿಸಿದರು. ಎಂ.ಕೆ. ಹೆಗಡೆ ವಂದಿಸಿದರು.