ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವಗೆ ಸುವರ್ಣಗಿರಿ ಪ್ರಶಸ್ತಿ

| Published : Apr 27 2025, 01:50 AM IST

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವಗೆ ಸುವರ್ಣಗಿರಿ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸುವರ್ಣಗಿರಿ ಸಂಸ್ಥಾನ ಮಠದಿಂದ ಕೊಡಮಾಡುವ 2025ರ ಸುವರ್ಣಗಿರಿ ಪ್ರಶಸ್ತಿಗೆ ಕೊಪ್ಪಳ ತಾಲೂಕಿನ ತೊಗಲುಗೊಂಬೆ ಆಟದ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಆಯ್ಕೆ ಮಾಡಲಾಗಿದೆ.

ಕನಕಗಿರಿ:

ಪಟ್ಟಣದ ಸುವರ್ಣಗಿರಿ ಸಂಸ್ಥಾನ ಮಠದಿಂದ ಕೊಡಮಾಡುವ 2025ರ ಸುವರ್ಣಗಿರಿ ಪ್ರಶಸ್ತಿಗೆ ಕೊಪ್ಪಳ ತಾಲೂಕಿನ ತೊಗಲುಗೊಂಬೆ ಆಟದ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಮಠ ತಿಳಿಸಿದೆ.

ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಬಸವ ಜಯಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿರುವ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಥಕ ಸಂಘದ ಸದಸ್ಯ ಡಿ.ಎಂ. ಅರವಟಗಿಮಠ, ಈ ವರೆಗೆ ಸುವರ್ಣಗಿರಿ ಪ್ರಶಸ್ತಿಯನ್ನು ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ವಿ. ಯಕ್ಕುಂಡಿಮಠ, ಸಂಗೀತಗಾರ ಅಂಬಯ್ಯ ನೂಲಿ, ಹಂಪಿ ವಿವಿ ಕುಲಪತಿ ಡಾ. ಸ.ಚಿ. ರಮೇಶ, ಚಾಣುಕ್ಯ ಕರಿಯರ್ ಅಕಾಡೆಮಿಯ ನಿಂಗನಗೌಡ ಬಿರಾದಾರ, ಪದ್ಮಶ್ರೀ ಡಾ. ವೆಂಕಟೇಶಕುಮಾರ, ಗದುಗಿನ ವೀರೇಶ್ವರ ಪುಣ್ಯಾಶ್ರಮ, ಡಾ. ಅನ್ನದಾನೀಶ್ವರ ಶ್ರೀಗೆ ನೀಡಿ ಗೌರವಿಸಲಾಗಿದೆ ಎಂದರು.

ಅದರಂತೆ ಈ ವರ್ಷ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಆಯ್ಕೆ ಮಾಡಲಾಗಿದೆ. ಇಂತಹ ಕಲಾವಿದರಿಗೆ ಅಗ್ರಗಣ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಶ್ರೀಮಠವು ಹತ್ತಾರು ದಶಕಗಳಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ಮುಖಂಡ ಶರಣಪ್ಪ ಭತ್ತದ ಮಾತನಾಡಿ, ಸಮಾಜವನ್ನು ಪರಿಪೂರ್ಣದೆಡೆಗೆ ಕೊಂಡ್ಯೊಯುವ ನಿಟ್ಟಿನಲ್ಲಿ ಸುವರ್ಣಗಿರಿಮಠವು ತಿಂಗಳ ಪರ್ಯಂತ ನಡೆಸುವ ಅಧ್ಯಾತ್ಮ ಪ್ರವಚನ, ಶ್ರೀಗಳ ದುಶ್ಚಟಗಳ ಜೋಳಿಗೆ ಕಾರ್ಯಕ್ರಮ ಯಶಸ್ವಿಯತ್ತ ಸಾಗುತ್ತಿದೆ. ಬಸವ ಜಯಂತಿ ನಿಮಿತ್ತ ಉಚಿತ ಆರೋಗ್ಯ ತಪಾಸಣೆ, ನೇತ್ರ ಶಸ್ತ್ರಚಿಕಿತ್ಸೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ಬಸವ ಮೂರ್ತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಏ. 29, 30ರಂದು ರಸಮಂಜರಿ ಕಾರ್ಯಕ್ರಮ ಶ್ರೀಮಠದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಪ್ರಮುಖರಾದ ಗಂಗಾಧರಸ್ವಾಮಿ ಕಲುಬಾಗಿಲಮಠ, ಬಸವರಾಜ ಗುಗ್ಗಳಶೆಟ್ರ, ರುದ್ರಮುನಿಯಪ್ಪ ಪ್ರಭುಶೆಟ್ಟರ್, ಶರಣಪ್ಪ ಭತ್ತದ, ವಾಗೀಶ ಹಿರೇಮಠ, ನಾಗಪ್ಪ ಜನಾದ್ರಿ, ವೀರೇಶ ಸಮಗಂಡಿ, ಮಹಾಂತೇಶ ಸಜ್ಜನ್, ಸಣ್ಣ ಕನಕಪ್ಪ, ಮೃತ್ಯುಂಜಯ್ಯಸ್ವಾಮಿ ಭೂಸನೂರಮಠ, ವೀರಭದ್ರಪ್ಪ ಕುಂಬಾರ ಇದ್ದರು.