ಡಿ.೧೦ರಂದು ನೇಕಾರರಿಂದ ಸುವರ್ಣಸೌಧ ಚಲೋ

| Published : Nov 14 2024, 12:46 AM IST

ಸಾರಾಂಶ

ವೃತ್ತಿಪರ ನೇಕಾರರ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಬರೆದ ಮನವಿಯನ್ನು ರಬಕವಿ-ಬನಹಟ್ಟಿ ತಹಸೀಲ್ದಾರ್‌ ಗಿರೀಶ ಸ್ವಾದಿಗೆ ಸಲ್ಲಿಸಲಾಯಿತು

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯದಲ್ಲಿ ೩ ವರ್ಷಗಳಲ್ಲಿ ಸಾಲದ ಹೊರೆ ತಾಳದೇ ೫೩ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯದ ಸಿಎಂ, ಸಚಿವರು ಇದರ ಬಗ್ಗೆ ಸೌಜನ್ಯಕ್ಕೂ ಆಯಾ ನೊಂದ ನೇಕಾರ ಕುಟುಂಬಗಳಿಗೆ ಸಾಂತ್ವ ಹೇಳಿಲ್ಲ. ನೇಕಾರರರೆಡೆಗಿನ ಸರ್ಕಾರದ ದಿವ್ಯ ನಿರ್ಲಕ್ಷ್ಯ ಮತ್ತು ಅನ್ಯಾಯ ಖಂಡಿಸಿ ರಾಜ್ಯದ ಹತ್ತಾರು ಜಿಲ್ಲೆಗಳ ಸಾವಿರಾರು ನೇಕಾರರು ಡಿ.೧೦ರಂದು ಬೈಕ್, ರೈಲುಗಳ ಮೂಲಕ ಸುವರ್ಣಸೌಧ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದವರು ತಿಳಿಸಿದ್ದಾರೆ.

ವೃತ್ತಿಪರ ನೇಕಾರರ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಬರೆದ ಮನವಿಯನ್ನು ರಬಕವಿ-ಬನಹಟ್ಟಿ ತಹಸೀಲ್ದಾರ್‌ ಗಿರೀಶ ಸ್ವಾದಿಗೆ ಸಲ್ಲಿಸಲಾಯಿತು.

ಸರ್ಕಾರಗಳು ನೇಕಾರರನ್ನು ನಿರ್ಲಕ್ಷಿಸುವುದು ಸಲ್ಲದು. ದಶಕಗಳ ಕಾಲ ಗ್ರಾಮ ಮಟ್ಟದಿಂದ ಹೋರಾಟ ರೂಪಿಸಿ, ವಿಧಾನಸೌಧದೆದುರು ಧರಣಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸರ್ಕಾರಗಳು ಇದೂವರೆಗೆ ನೇಕಾರರಿಗೆ ನ್ಯಾಯ ಒದಗಿಸಿಲ್ಲ. ಆತ್ಮಹತ್ಯೆಗೀಡಾದ ೫೩ ನೇಕಾರ ಕುಟುಂಬಗಳಿಗೆ ಕನಿಷ್ಠ ₹೧೦ ಲಕ್ಷ ಪರಿಹಾರ ನೀಡಬೇಕು. ರಾಜ್ಯದ ನೇಕಾರರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕಟ್ಟಡ ಕಾರ್ಮಿಕ ಮಾದರಿಯ ಸೌಲಭ್ಯಗಳನ್ನು ವೃತ್ತಿಪರ ನೇಕಾರರಿಗೂ ಜಾರಿಗೊಳಿಸಿ ಗುರುತಿನ ಚೀಟಿಯೊಡನೆ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ. ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ನಿಗಮದಲ್ಲಿನ ನೂರಾರು ಕೈಮಗ್ಗ ನೇಕಾರರಿಗೆ ನಿವೇಶನ ಮತ್ತು ಮನೆಗಳ ಸಿಟಿಎಸ್ ಉತಾರೆಗಳಿಲ್ಲ, ಅಂಥ ನೇಕಾರರಿಗೆ ನಿವೇಶನ ಮತ್ತು ಮನೆಗಳಿಗೆ ಸಿಟಿಎಸ್ ಉತಾರೆ ಹಂಚಬೇಕು. ೫೫ ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಸಿಕ ಕನಿಷ್ಠ ₹೫ಸಾವಿರ ಮಾಸಾಶನ ನೀಡಬೇಕು. ಕೈಮಗ್ಗ, ಜವಳಿ ಇಲಾಖೆಯ ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ದಿ ನಿಗಮ, ಸಹಕಾರಿ ಸಂಘ-ಸಂಸ್ಥೆಗಳಲ್ಲಿ ನೇಕಾರರ ಹೆಸರಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಿರಂತರವಾಗಿ ಸಾಗುತ್ತಿದೆ. ಸರ್ಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಂಡು ತಕ್ಷಣ ಭ್ರಷ್ಟಾಚಾರ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ನೇಕಾರರು ನಿರಂತರ ನೇಕಾರಿಕೆ ಉದ್ಯೋಗದಲ್ಲಿ ತೊಡಗುವತ್ತ ತಮಿಳುನಾಡು ಮಾದರಿ ಯೋಜನೆ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದಂತೆ ನೇಕಾರರಿಗೆ ಭುನಕರ್ ಸಮ್ಮಾನ್ ಯೋಜನೆ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ೨೦೨೪-೨೫ರ ಜವಳಿ ನೀತಿ ರೂಪಿಸುತ್ತಿದ್ದು, ರಾಜ್ಯದ ಕಟ್ಟಕಡೆ ನೇಕಾರನಿಗೂ ನ್ಯಾಯ ಸಮ್ಮತ ಯೋಜನೆ ಫಲ ದೊರೆಯುವಂತೆ ನೇಕಾರ ಸಂಘಟನೆಗಳ ಸಲಹೆಗಳನ್ವಯ ಉದ್ಯಮ ಉಳಿಸುವತ್ತ ಜವಳಿ ನೀತಿ ಜಾರಿಗೊಳಿಸಬೇಕು ಎಂದಿದ್ದಾರೆ.

ನೇಕಾರ ಸಮ್ಮಾನ್ ಯೋಜನೆಯಿಂದ ಹೊರಗುಳಿದಿರುವ ವೃತ್ತಿಪರ ನೇಕಾರರಿಗೂ ಯೋಜನೆಯ ಫಲ ದೊರಕಿಸಬೇಕು. ರಾಜ್ಯದ ಪವರ್‌ ಲೂಂ ನೇಕಾರರಿಗೆ ಸಂಬಂಧಿತ ವಿದ್ಯುತ್ ಬಿಲ್ ಸಮಸ್ಯೆಗೆ ಇದೂವರೆಗೆ ಸ್ಪಂದಿಸದ ಸರ್ಕಾರ ಬಾಕಿ ವಿದ್ಯುತ್ ಬಿಲ್‌ಗೆ ಯಾವುದೇ ದಂಡ, ಬಡ್ಡಿ, ಹೆಚ್ಚುವರಿ ಶುಲ್ಕವಿಲ್ಲದೇ ಪ್ರತಿ ಯುನಿಟ್‌ಗೆ ₹೧.೨೫ ಪೈಸೆಯಂತೆ ಕಂತುಗಳ ಮೂಲಕ ಬಾಕಿ ಭರಿಸಿಕೊಳ್ಳಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯ ಹಲವಾರು ಯೋಜನೆಗಳು ಅನುದಾನ ಕೊರತೆ ಕಾರಣ ನೇಕಾರರು ಸೌಲಭ್ಯ ವಂಚಿತರಾಗುವಂತಾಗಿದ್ದು, ₹೧೫೦೦ ಕೋಟಿ ಅನುದಾನ ಇಲಾಖೆಗೆ ಒದಗಿಸಿ ಎಲ್ಲ ನೇಕಾರರಿಗೂ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ವೃತ್ತಿಪರ ನೇಕಾರಿಕೆಗೆ ನೆರವಾಗದೇ ನೇಕಾರ ಸಹಕಾರಿ ಸಂಘಗಳು ವೃತ್ತಿ ರಹಿತ ಸದಸ್ಯರೊಡನೆ ಬೇಕಾಬಿಟ್ಟಿ ಕೆಲಸ ಮಾಡುತ್ತ ಕೇವಲ ಚುನಾವಣೆಗೆ ಮಾತ್ರ ವೃತ್ತಿಪರ ನೇಕಾರರು ಬಳಕೆಯಾಗದಂತೆ ತಡೆದು, ಸಂಸ್ಥೆಗಳಲ್ಲಿ ನೇಕಾರರೇ ಸದಸ್ಯರಾಗುವಂತೆ ಕಠಿಣ ನಿಯಮ ರೂಪಿಸಬೇಕು. ಈ ಎಲ್ಲ ಮೇಲ್ಕಂಡ ವಿಷಯಗಳ ಕಾರಣ ರಾಜ್ಯಾದ್ಯಂತ ಹಲವೆಡೆ ನೇಕಾರರು ಅನಿವಾರ್ಯವಿಲ್ಲದೇ, ಅಭದ್ರತೆ ಕಾರಣ ಬೇರೆ ಉದ್ಯೋಗಗಳತ್ತ ತೊಡಗುವ ಇಲ್ಲವೇ ಉದ್ಯೋಗ ಅರಸಿ ಗುಳೇ ಹೋಗುತ್ತಿರುವ ದುಸ್ಥಿತಿ ಎದುರಾಗಿದೆ. ನೇಕಾರಿಕೆ ನಶಿಸಿ ಹೋಗುವ ಅಪಾಯದಲ್ಲಿರುವುದರಿಂದ ನೇಕಾರ ಮತ್ತು ನೇಕಾರಿಕೆ ಉದ್ಯಮದ ಉಳಿವಿಗೆ ಜವಳಿ ಸಚಿವರು ತುರ್ತಾಗಿ ಸಿಎಂ ಜೊತೆ ನೇಕಾರರ ಸಭೆ ಏರ್ಪಡಿಸಿ, ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ, ಆರ್.ಐ.ಹೋಳಗಿ, ಅಶೋಕ ಕರ್ಲಟ್ಟಿ, ಸುಭಾಸ್ ಇಟನಾಳ, ಎಸ್.ಎಸ್.ದುರ್ಗಣ್ಣವರ, ಪಿ.ಬಿ.ಸಿಂದಗಿ,ಮಹಾನಿಂಗ ಬರಗಿ, ಎ.ಪಿ.ಬಾಣಕಾರ, ಪಿ.ಬಿ.ಸಿದ್ದಾಪುರ,ಸದಾಶಿವ ಬರಗಿ ಸೇರಿದಂತೆ ಅನೇಕರಿದ್ದರು.