ಸಾರಾಂಶ
ಸಹಕಾರಿ ಪರಿಸರದಲ್ಲಿ ಸಹಕಾರಿ ಸಂಘಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಗ್ರಾಹಕರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಬಲಗೊಳ್ಳಲು ಸಹಕರಿಸಲಿ
ಗದಗ: ಸುವಿಧಾ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ ₹5 ಲಕ್ಷ 29 ಸಾವಿರಗಳ ಲಾಭದೊಂದಿಗೆ ಪ್ರಗತಿಯಲ್ಲಿ ಮುನ್ನಡೆದಿದ್ದು, ಶೇರುದಾರರಿಗೆ ಶೇ. 10 ರಷ್ಟು ಡಿವಿಡೆಂಡ್ ವಿತರಿಸಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ವಿ. ಸಂಕನೂರ ಹೇಳಿದರು.
ಅವರು ನಗರದ ಸಂಘದ ಸಭಾಂಗಣದಲ್ಲಿ ನಡೆದ ಸಂಘದ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘಕ್ಕೆ 906 ಸದಸ್ಯರಿದ್ದು,ಗ್ರಾಹಕರು ಸಂಘದಲ್ಲಿ ವಿಶ್ವಾಸದೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ. ಶೇರು, ಡಿಪಾಸಿಟ್ ಹಾಗೂ ಇತರೆ ಹಣಕಾಸು ವ್ಯವಹರಿಸುತ್ತ ಸಂಘದ ಆರ್ಥಿಕ ಪ್ರಗತಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಶಾಂತಯ್ಯ ಮುತ್ತಿನಪೆಂಡಿಮಠ ಮಾತನಾಡಿ, ಕಣಗಿನಹಾಳದ ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಸಹಕಾರಿ ಪಿತಾಮಹ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ದೇಶದಲ್ಲಿಯೇ ಪ್ರಪ್ರಥಮ ಸಹಕಾರಿ ಸಂಘ ಕಣಗಿನಹಾಳದಲ್ಲಿ ಸ್ಥಾಪನೆಗೊಂಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಇಂತಹ ಸಹಕಾರಿ ಪರಿಸರದಲ್ಲಿ ಸಹಕಾರಿ ಸಂಘಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಗ್ರಾಹಕರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಬಲಗೊಳ್ಳಲು ಸಹಕರಿಸಲಿ ಎಂದರು.ಸಹಕಾರಿ ರಂಗದ ಭೀಷ್ಮ,ಸಹಕಾರಿ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾಗಿರುವ ಸಿದ್ಧನಗೌಡ ಪಾಟೀಲರ ಪುತ್ಥಳಿಯನ್ನು ಗದುಗಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲು ಜಿಲ್ಲಾಡಳಿತ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಇದಕ್ಕೆ ಗದಗ ಜಿಲ್ಲೆಯ ಎಲ್ಲ ಸಹಕಾರಿ ಸಂಘ ಸಂಸ್ಥೆಗಳು ಒತ್ತಾಯ ಮಾಡಬೇಕೆಂದು ಎಂದರು.
ಸಂಘದ ಉಪಾಧ್ಯಕ್ಷ ರಾಮಪ್ಪ ಅಗಸಿಮನಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ರವಿ ಹೊಸೂರ, ಹಿರೇಮಠ, ನಿರ್ದೇಶಕ ಡಿ.ಕೆ. ಅಬ್ಬಿಗೇರಿ, ಶಾಂತಾ ಸಂಕನೂರ, ಎಸ್.ಎಸ್. ಯಳವತ್ತಿ, ಪದ್ಮಾವತಿ ಜಾಡರ, ರೇಖಾ ಆಸಂಗಿ, ಕೆ. ನಿಖಿಲ್‌ರಡ್ಡಿ, ಶಿವಪ್ಪ ಗೋಣೆಪ್ಪನವರ, ಉಮೇಶ ತಿಮ್ಮನಗೌಡ್ರ, ಮೈಲಾರಪ್ಪ, ಸೋಮಗೊಂಡ ಇದ್ದರು. ಪದ್ಮಾವತಿ ಜಾಡರ ಪ್ರಾರ್ಥಿಸಿದರು. ಎಂ.ವೈ. ಹೊಸೂರ ಸ್ವಾಗತಿಸಿದರು. ಅಶೋಕ ಅಂಗಡಿ ನಿರೂಪಿಸಿದರು. ನಿರ್ಮಲಾ ವಂದಿಸಿದರು.