ಸಾರಾಂಶ
ಮೈಸೂರು : ದಾನಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದು ರಕ್ತದಾನ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ಅವಶ್ಯಕ ಇರುವವರಿಗೆ ದಾನಿಗಳಿಂದ ರಕ್ತ ಪಡೆದು ರೋಗಿಗಳಿಗೆ ನೀಡುವುದರ ಮೂಲಕ ಜೀವಗಳನ್ನು ಉಳಿಸಬೇಕು ಎಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.
ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಡೆಂಘೀ ಜ್ವರದಿಂದ ಬಳಲುತ್ತಿರುವ ರೋಗಿಗೆ ಬಿಳಿ ರಕ್ತ ಕಣಗಳು ಅತ್ಯವಶ್ಯಕವಾಗಿರುವುದರಿಂದ ರಕ್ತದಾನ ಮಾಡಲು ಆಗಿಂದಾಗ್ಯೆ ರಕ್ತದಾನ ಶಿಬಿರಗಳನ್ನು ಸುಯೋಗ್ ಆಸ್ಪತ್ರೆಯಿಂದ ಆಯೋಜಿಸಲಾಗುವುದು ಎಂದರು.
ರಕ್ತ ನೀಡಿದರೆ ಕಾಯಿಲೆಗಳು ಉಂಟಾಗುತ್ತವೆ ಎಂಬ ಮೂಢನಂಬಿಕೆ ಅನೇಕ ಜನರಲ್ಲಿದ್ದು, ದೇಹದಲ್ಲಿ ಪ್ರತಿನಿತ್ಯ ರಕ್ತ ಪುನರೋತ್ಪತ್ತಿಯಾಗುವುದರಿಂದ ರಕ್ತದಾನದಿಂದ ಯಾವ ಹಾನಿಯೂ ಉಂಟಾಗುವುದಿಲ್ಲ ಎಂದರು.
ಪದ್ಮಶ್ರೀ ಪುರಸ್ಕೃತರಾದ ಡಾ. ಸುದೀಪ್ತ ಬ್ಯಾನರ್ಜಿ ಮಾತನಾಡಿ, ಅತಿ ಶ್ರೇಷ್ಠವಾದ ರಕ್ತದಾನವನ್ನು ಪ್ರತಿಯೊಬ್ಬರೂ ಕನಿಷ್ಠ 6 ತಿಂಗಳಿಗೊಮ್ಮೆ ಮಾಡಬಹುದು ಎಂದು ಹೇಳಿದರು.
ಈ ಶಿಬಿರದಲ್ಲಿ ಸುಯೋಗ್ ಆಸ್ಪತ್ರೆಯ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ನೀಡಿದರಲ್ಲದೆ ಅವರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಸುಯೋಗ್ ಆಸ್ಪತ್ರೆಯ ನಿರ್ದೇಶಕಿ ಡಾ. ಯಶಿತಾ ರಾಜ್, ಕಾರ್ಯನಿರ್ವಾಹಕ ಅಧಿಕಾರಿ ಸಾಗರ್ ಮೊದಲಾದವರು ಇದ್ದರು.