ನೈಋತ್ಯ ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ: ಮತದಾರರ ನೋಂದಣಿಗೆ ಇನ್ನು ಎರಡೇ ದಿನ ಅವಕಾಶ

| Published : May 04 2024, 12:32 AM IST

ನೈಋತ್ಯ ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ: ಮತದಾರರ ನೋಂದಣಿಗೆ ಇನ್ನು ಎರಡೇ ದಿನ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್‌ 3ರಂದು ಮತದಾನ ನಡೆಯಲಿದ್ದು, ದ.ಕ. ಜಿಲ್ಲೆಯಲ್ಲಿ ಸುಮಾರು 12 ಮತದಾನ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ

ಕನ್ನಡಪ್ರಭ ವಾರ್ತೆ ಮಂಗಳೂರುನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಮೇ 9 ರಿಂದ 16 ರ ವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ನಾಮಪತ್ರ ವಿಭಾಗೀಯ ಕಚೇರಿ ಮೈಸೂರಿನಲ್ಲಿ ಸಲ್ಲಿಸಲು ಅವಕಾಶ ಇದೆ. ಈ ಚುನಾವಣೆಗೆ ಎರಡೂ ಕ್ಷೇತ್ರಗಳ ಮತದಾರರ ನೋಂದಣಿಗೆ ಮೇ 6 ರ ವರೆಗೆ ಅವಕಾಶ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಕ್ಷೇತ್ರಗಳ ಚುನಾವಣೆಗೆ ಪ್ರತಿ ಬಾರಿ ಹೊಸದಾಗಿ ಮತದಾರರ ನೋಂದಣಿಯಾಗಬೇಕು. ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿ ಡಿಸೆಂಬರ್‌ 30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಅದರ ಪ್ರಕಾರ ದ.ಕ.ಜಿಲ್ಲೆಯಲ್ಲಿ ಒಟ್ಟು 6,753 ಮಂದಿ ಶಿಕ್ಷಕರ ನೋಂದಣಿಯಾಗಿದ್ದು, ಇದರಲ್ಲಿ 2,233 ಪುರುಷ ಹಾಗೂ 4,520 ಮಹಿಳಾ ಮತದಾರರಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ಒಟ್ಟು 16,869 ಮಂದಿ ನೋಂದಾಯಿಸಿದ್ದು, 7,075 ಪುರುಷ ಹಾಗೂ 9,793 ಮಹಿಳಾ ಮತದಾರರಿದ್ದಾರೆ.

ಈಗ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಇನ್ನೂ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿದೆ.ನೋಂದಣಿಗೆ ಅರ್ಹತೆ: ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೆ 2023ರ ನವೆಂಬರ್‌ 1ರ ಮೊದಲು ಆರು ವರ್ಷ ಅವಧಿಯಲ್ಲಿ ಕನಿಷ್ಠ ಮೂರು ವರ್ಷ ಬೋಧನಾ ವೃತ್ತಿಯಲ್ಲಿ ತೊಡಗಿಸಿರಬೇಕು. ಪದವೀಧರ ಕ್ಷೇತ್ರಕ್ಕೆ 2023 ನವೆಂಬರ್‌ 1ರ ಮೊದಲು ಮೂರು ವರ್ಷದಲ್ಲಿ ಅಂದರೆ 1-11-2020ಕ್ಕಿಂತ ಮೊದಲು ಮಾನ್ಯತೆ ಪಡೆದ ವಿವಿಯಿಂದ ಪದವೀಧರರಾಗಿರಬೇಕು. ನಿಗದಿತ ನಮೂನೆಯಲ್ಲಿ ಅರ್ಜಿಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕು ಎಂದರು. ಜೂ.3ರಂದು ಮತದಾನ:

ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 20 ರಂದು ಜೂನ್‌ 3ರಂದು ಮತದಾನ ನಡೆಯಲಿದ್ದು, ದ.ಕ. ಜಿಲ್ಲೆಯಲ್ಲಿ ಸುಮಾರು 12 ಮತದಾನ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಜೂನ್‌ 6 ರಂದು ಮತ ಎಣಿಕೆ ನಡೆಯಲಿದೆ. ಜೂ.12ರಂದು ನೀತಿಸಂಹಿತೆ ಕೊನೆಗೊಳ್ಳಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್‌ ಕುಮಾರ್ ಇದ್ದರು.