ಸ್ವಾಭಿಮಾನ ಬಳಗ ಉದ್ಘಾಟನೆ, ವೆಬ್‌ಸೈಟ್ ಲೋಕಾರ್ಪಣೆ ನಾಳೆ

| Published : Nov 16 2024, 12:35 AM IST / Updated: Nov 16 2024, 12:36 AM IST

ಸ್ವಾಭಿಮಾನ ಬಳಗ ಉದ್ಘಾಟನೆ, ವೆಬ್‌ಸೈಟ್ ಲೋಕಾರ್ಪಣೆ ನಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ, ಶೈಕ್ಷಣಿಕ ಅಸಮಾನತೆ ನಿರ್ಮೂಲನೆಗಾಗಿ ಸ್ಥಾಪಿತ ಸ್ವಾಭಿಮಾನ ಬಳಗದ ಉದ್ಘಾಟನೆ ಹಾಗೂ ಬಳಗದ ಧ್ಯೇಯೋದ್ದೇಶಗಳ ಕುರಿತಂತೆ ಮಾಹಿತಿ ನೀಡುವ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ನ.17ರಂದು ನಗರದ ಎಸ್.ಎಸ್. ಲೇಔಟ್‌ ಎ ಬ್ಲಾಕ್‌ನ ಬಳಗದ ಕಚೇರಿಯಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ, ಶೈಕ್ಷಣಿಕ ಅಸಮಾನತೆ ನಿರ್ಮೂಲನೆಗಾಗಿ ಸ್ಥಾಪಿತ ಸ್ವಾಭಿಮಾನ ಬಳಗದ ಉದ್ಘಾಟನೆ ಹಾಗೂ ಬಳಗದ ಧ್ಯೇಯೋದ್ದೇಶಗಳ ಕುರಿತಂತೆ ಮಾಹಿತಿ ನೀಡುವ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ನ.17ರಂದು ನಗರದ ಎಸ್.ಎಸ್. ಲೇಔಟ್‌ ಎ ಬ್ಲಾಕ್‌ನ ಬಳಗದ ಕಚೇರಿಯಲ್ಲಿ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ ಬಳಗದ ಉದ್ಘಾಟನೆ ಹಾಗೂ ವೆಬ್‌ ಸೈಟ್ ಲೋಕಾರ್ಪಣೆ, ಸಮಾರಂಭದಲ್ಲಿ ಹಿತೈಷಿಗಳು, ಸಮಾನ ಮನಸ್ಕರು, ವಿದ್ಯಾರ್ಥಿ- ಯುವಜನರು ಪಾಲ್ಗೊಳ್ಳುವರು. ನಂತರ ಬಳಗದ ಸಭೆಯನ್ನು ನಡೆಸಿ, ಚರ್ಚೆ ನಡೆಸಲಾಗುವುದು ಎಂದು ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ತಿಳಿಸಿದ್ದಾರೆ.

ನಾಡಿನ ಕನ್ನಡಿಗರು ಸ್ವಾಭಿಮಾನ, ಸಮಾನತೆ, ಸಹಬಾಳ್ವೆಯಲ್ಲಿ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಹಾಗಾಗಿ ಈ ನೆಲದ ಸ್ವಾಭಿಮಾನಿಗೆಳೆಲ್ಲರೂ ಸಾಮಾಜಿಕ ಕಳಕಳಿಯೊಂದಿಗೆ ಸೇರಿ ನಾಡು, ನುಡಿ, ಭಾಷೆ ಮತ್ತು "ಶೈಕ್ಷಣಿಕ-ರಾಜಕೀಯ ಸಮಾನತೆಗೆ " ಸಾಮಾಜಿಕ ಬದ್ಧತೆಯೊಂದಿಗೆ ಒಗ್ಗೂಡಿ ಸಂಘಟನಾತ್ಮಕ ಹೋರಾಟದೊಂದಿಗೆ ಬಳಗ ಮುನ್ನಡೆಯಲಿದೆ. ಯಾವ ವೈಯಕ್ತಿಕ ಸ್ವಾರ್ಥ ಇರದೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ಸರ್ವ ಸ್ವಾಭಿಮಾನಿಗಳೂ ಬಳಗವನ್ನು ಮುನ್ನಡೆಸೋಣ ಎಂದು ಅವರು ಮನವಿ ಮಾಡಿದ್ದಾರೆ.

ಸಮೃದ್ಧ ಸಮಾಜ ನಿರ್ಮಾಣ-ಸ್ವಾಭಿಮಾನದ ಜೀವನದೊಂದಿಗೆ ಸರ್ವ ಸಮಾಜದ ಸಮಾನ-ಮನಸ್ಕರ ಸ್ವಾಭಿಮಾನಿಗಳನ್ನು ಒಳಗೊಂಡು ಒಂದಾಗಿ ನಡೆಯೋಣ ಒಗ್ಗಟ್ಟಾಗಿ ಬಾಳೋಣ ಎಂಬ ಧ್ಯೇಯವಾಕ್ಯದಡಿ ಬಳಗ ಸಾಗಲಿದೆ. ಸ್ವಾಭಿಮಾನಿ ಬಳಗ ರಾಜ್ಯದಲ್ಲಿ ದೊಡ್ಡದಾಗಿ ಬೆಳೆದೇ ಬೆಳೆಯುತ್ತದೆ. ರಾಜ್ಯದ ಜನರು ಸ್ವಾಭಿಮಾನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹಾಗಾಗಿ ಬಳಗವು ಜನರನ್ನು ತಲುಪಲಿದೆ ಎಂಬ ದೃಢವಾದ ನಂಬಿಕೆ ನನ್ನದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಗ ಸೇರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿ ರಾಜಕೀಯ ಪ್ರಜ್ಞೆ ಮೂಡಿಸುವ ಜೊತೆಗೆ ಅಭಿವೃದ್ಧಿ ಪರ್ವ ಶುರುವಾಗುತ್ತದೆ. ನಾವೆಲ್ಲರೂ ಸೇರಿ ಸ್ವಾಭಿಮಾನಿ ಬಳಗ ಸ್ಥಾಪಿಸಿದ್ದೇವೆ. ನನ್ನ ಹೋರಾಟ ಸ್ವಾಭಿಮಾನದ್ದು. ಎಲ್ಲರಿಗೂ ಪಾಲು ಸಿಗಬೇಕು, ರಾಜಕೀಯ ಹಿನ್ನೆಲೆ ಇಲ್ಲದವರಿಗೆ ರಾಜಕೀಯ ಸ್ಥಾನಮಾನ ಸಿಗುವಂತಾಗಬೇಕು. ಸಾಮಾಜಿಕ ಕಳಕಳಿ, ಬದ್ಧತೆ, ಸ್ವಾಭಿಮಾನ ಇರುವವರು ರಾಜಕಾರಣಕ್ಕೆ ಬರಬೇಕು ಎಂಬ ಸದುದ್ದೇಶ ಇದೆ ಎಂದು ಅವರು ತಿಳಿಸಿದ್ದಾರೆ. ದಾವಣಗೆರೆ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರನಾಗಿ ತಾವು ಸ್ಪರ್ಧೆ ಮಾಡಿದ್ದು ಜೀವನದ ಕಠಿಣ ನಿರ್ಧಾರಗಳಲ್ಲೊಂದಾಗಿದೆ. ಆದರೂ ಜನರು ತೋರಿದ ಪ್ರೀತಿಗೆ ನಾನು ಚಿರ ಋಣಿ. ಕರ್ನಾಟಕದ ಬೇರೆ ಬೇರೆ ಜಿಲ್ಲೆ, ತಾಲೂಕಿನಲ್ಲಿರುವವರು ಸಹ ಬಳಗ ಸೇರಬಹುದು. ಎಲ್ಲರನ್ನೂ ಜೊತೆಗೂಡಿ ಮುನ್ನಡೆಯುತ್ತೇವೆ. ಉದ್ದೇಶಪೂರ್ವಕ, ರಾಜಕೀಯವಾಗಿ ಬಳಗವನ್ನ ಹುಟ್ಟು ಹಾಕಿದ್ದಲ್ಲ. ನನ್ನ ಪ್ರಯತ್ನ ಮೆಚ್ಚಿದವರು, ಸ್ನೇಹಿತರು, ಹಿತೈಷಿಗಳು ಹುಟ್ಟು ಹಾಕಿದ ಬಳಗ ಇದು. ನ.17ರಂದು ಬಳಗದ ವೆಬ್ ಸೈಟ್ ಲೋಕಾರ್ಪಣೆ ಮಾಡುತ್ತಿದ್ದೇವೆ, ಅದೇ ಉದ್ಘಾಟನಾ ಸಮಾರಂಭದ ನಂತರ ಸಭೆಯಲ್ಲೂ ಅನೇಕ ವಿಷಯಗಳ ಬಗ್ಗೆ ಸಭೆ ಮಾಡಿ, ಚರ್ಚಿಸಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಬೀದರ್, ಮೈಸೂರು, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿ ಇತರೆಡೆ ನಾನು ಹೋಗಿ ಬಂದಿದ್ದೇನೆ. ಎಲ್ಲೆಡೆ ಜನರು ಆಹ್ವಾನಿಸುತ್ತಿದ್ದಾರೆ. ರಾಜಕೀಯ ಪ್ರಜ್ಞೆ ಮೂಡಿಸುವುದು, ಶೈಕ್ಷಣಿಕ ಅಸಮಾನತೆ ನಿರ್ಮೂಲನೆಯಾದರೆ ಎಲ್ಲವೂ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇರುವ ಕಾರ್ಯಕ್ರಮಕ್ಕೆ ಹೆಚ್ಚಾಗಿ ಹೋಗುತ್ತಿದ್ದೇನೆ. ರಾಜಕಾರಣ ಮಾತನಾಡುವ ಬದಲು ವಿದ್ಯಾರ್ಥಿಗಳಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರಗಳ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿ ಹೊಸ ಅಭಿವೃದ್ಧಿ ಪರ್ವ, ರಾಜಕೀಯ ಪ್ರಜ್ಞೆ ಹುಟ್ಟು ಹಾಕುವ ನಿಟ್ಟಿನಲ್ಲಿ ಬಳಗ ಕಾರ್ಯೋನ್ಮುಖವಾಗಲಿದೆ. ಸ್ವಾಭಿಮಾನಿ ಬಳಗ ಉದ್ಘಾಟನೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ ಸಮಾರಂಭ ಹಾಗೂ ನಂತರ ನಡೆಯುವ ಸಭೆಯಲ್ಲಿ ಸಮಾನ ಮನಸ್ಕರು, ಹಿರಿಯರು, ಮಹಿಳೆಯರು, ಪುರುಷರು, ವಿದ್ಯಾರ್ಥಿ, ಯುವ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿ.ವಿನಯಕುಮಾರ ಮನವಿ ಮಾಡಿದ್ದಾರೆ.

- - -

-15ಕೆಡಿವಿಜಿ8: ಜಿ.ಬಿ.ವಿನಯಕುಮಾರ