ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮುಂದಿನ ತಿಂಗಳ 19 ಹಾಗೂ 20 ರಂದು ಬಸವಕಲ್ಯಾಣದ ಬೇಗ್ ಫಂಕ್ಷನ್ ಹಾಲ್‌ನಲ್ಲಿ 3ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಧರ್ಮ ಪೀಠದ ಸ್ವಾಭಿಮಾನಿ ಶರಣರ ಬಳಗದಿಂದ ಬಸವಕಲ್ಯಾಣದ ಶರಣ ಭೂಮಿಯಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದ್ದು, ಇದರಲ್ಲಿ ತೆಲಂಗಣಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಶರಣ, ಶರಣೆಯರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಅ.19 ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಅಂದು ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಸಮಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಬಸವ ಚಿಂತನ ಪ್ರಭೆಯ ಮೂಲಕ ವೇದಿಕೆಯ ದೈವೀಕರಣ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಧರ್ಮಚಿಂತನ ಗೋಷ್ಠಿ-1 ಜರುಗಲಿದೆ ಎಂದು ಮಾಹಿತಿ ನೀಡಿದರು.ಅ. 20 ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಪೂಜೆ ಹಾಗೂ ಬೆಳಗ್ಗೆ 10.30ಕ್ಕೆ ಶರಣ ವಂದನೆ 770 ಶರಣರಿಗೆ ಶರಣಾರ್ಥಿ ಹೃದಯಸ್ವಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ರಿಂದ 2ರ ವರೆಗೆ ಮಹಿಳಾಗೋಷ್ಠಿ ಮಧ್ಯಾಹ್ನ 3 ರಿಂದ 5ರ ವರೆಗೆ ಯುವಗೋಷ್ಠಿ ಹಾಗೂ ಸಂಜೆ ಸಮಾರೋಪ ಸಮಾರಂಭ ಜರುಗಲಿದೆ. ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆ ಇರಲಿದೆ. ಆದ್ದರಿಂದ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಗಳು ತಿಳಿಸಿದರು.
ಬೀದರ್ ಬಸವ ಮಂಟಪದ ಸಂಚಾಲಕರು ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ರಾಷ್ಟ್ರೀಯ ಅಧ್ಯಕ್ಷೆ ಸದ್ಗುರು ಸತ್ಯಾದೇವಿ ಮಾತಾಜಿ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಪ್ರಮುಖರಾದ ನಳರಣಪ್ಪ ಪಾಟೀಲ್ ಹಾರೂರಗೇರಿ, ನಿರ್ಮಲಾ ತಾಯಿ, ಬಸವಂತರಾವ ಬಿರಾದಾರ, ರವಿಕಾಂತ ಬಿರಾದಾರ, ಮಲ್ಲಿಕಾರ್ಜುನ ಶೆಂಬೆಳ್ಳಿ, ಗಿರಿಜಮ್ಮ ತಾಯಿ, ಶಿವರಾಜ ಶೆಟಕಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಶರಣ ಮೇಳಕ್ಕೆ ಒಂದಾಗಲು ಒಪಿಲ್ಲ: ಬಸವಕಲ್ಯಾಣ 2 ಪರ್ವಗಳನ್ನು ಮಾಡುವುದು ಬೇಡ, ಇದನ್ನು ಎಲ್ಲರು ಕೂಡಿ ಮಾಡೋಣ ಎಂದು ಮನವೊಲಿಸಲು ಪೊಲೀಸರು ಸಭೆ ಕರೆದಿದ್ದರು. ಆದರೆ, ಆ ಸಭೆಗೆ ನಮ್ಮ ಬೆಂಬಲಿಗರನ್ನು ಬರಲು ಬಿಡಲೇ ಇಲ್ಲ. ಅವರು ವ್ಯಾಜ್ಯ ಕುರಿತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ನಮ್ಮ ಪರ್ವ ನಾವು ಆಚರಿಸೋಣ ಎಂದು ನಿರ್ಧರಿಸಿ ಕಾರ್ಯಕ್ರಮ ಆಯೋಜಿಸಲಿದ್ದೇವೆ. 2 ದಿನಗಳ ವರೆಗೆ ನಡೆಯಲಿರುವ ಸಮಾರಂಭದಲ್ಲಿ ಸುಮಾರು 50 ಸಾವಿರ ಭಕ್ತರು ಬಂದು ಹೋಗುವ ನಿರೀಕ್ಷೆ ಇದ್ದು ಅವರಿಗೆ ವಸತಿ, ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಪೂಜ್ಯರು ತಿಳಿಸಿದರು.