ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಾದ್ಯಂತ ಸೆ.14ರಿಂದ ‘ಸ್ವಚ್ಚತಾ ಹೀ ಸೇವಾ ಆಂದೋಲನ’ವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅವಶ್ಯ ಸಿದ್ಧತಾ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ಚಚ್ಛತಾ ಧ್ಯೇಯೋದ್ದೇಶದೊಂದಿಗೆ ಸೆ.14ರಿಂದ ಅ.2ರ ವರೆಗೆ ಏರ್ಪಡಿಸಲಾಗುವ ‘ಸ್ವಚ್ಛತಾ ಹೀ ಸೇವಾ ಆಂದೋಲನ’ ಪಾಕ್ಷಿಕ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ನಿರ್ದೇಶನದನ್ವಯ ಪ್ರತಿವರ್ಷದಂತೆ ಈ ಬಾರಿಯೂ ಸ್ವಚ್ಛತೆ ಸಂಬಂಧ ವಿಶಿಷ್ಟ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದೆ. ಸ್ವಚ್ಛತೆಯೇ ಸೇವೆ ಶೀರ್ಷಿಕೆಯಡಿ ಸಾರ್ವಜನಿಕರಿಗೆ ಶುಚಿತ್ವ, ನೈರ್ಮಲ್ಯದ ಮಹತ್ವ ಕುರಿತು ವ್ಯಾಪಕ ಅರಿವು ಮೂಡಿಸುವುದೇ ಪಾಕ್ಷಿಕ ಆಚರಣೆಯ ಉದ್ದೇಶವಾಗಿದೆ. ‘ಸ್ವಚ್ಛತಾ ಹೀ ಸೇವಾ ಆಂದೋಲನ’ವನ್ನು ಸ್ಚಚ್ಛತಾ ಕಿ ಭಾಗಿದಾರಿ, ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಸಫಾಯಿ ಮಿತ್ರ, ಆರೋಗ್ಯ ಸುರಕ್ಷಾ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಪಾಕ್ಷಿಕ ಆಚರಣೆಯ ಮೊದಲ ದಿನ ಸ್ಚಚ್ಛತಾ ಕಿ ಭಾಗಿದಾರಿ ಕಾರ್ಯಕ್ರಮದಡಿ ಸ್ವಚ್ಛತಾ ಪ್ರತಿಜ್ಞಾ ಸ್ವೀಕಾರ, ಸ್ವಚ್ಛತಾ ಅರಿವು ಕಾರ್ಯಾಗಾರ, ಮ್ಯಾರಥಾನ್, ಸೈಕಲ್ ಜಾಥಾ, ಮಾನವ ಸರಪಳಿ, ವಿಶೇಷ ಗ್ರಾಮಸಭೆ, ಯುವಕರ ಜಾಥಾ, ತ್ಯಾಜ್ಯವಸ್ತುಗಳಿಂದ ಚಿತ್ರಕಲೆ, ಬ್ರ್ಯಾಂಡಿಂಗ್ ಚಟುವಟಿಕೆ, ತಾಯಿ ಹೆಸರಿನಲ್ಲಿ ಸಸಿ ನೆಡುವ ಅಭಿಯಾನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ರಂಗೋಲಿ, ಚರ್ಚಾಸ್ಪರ್ಧೆ, ಗ್ರಾಮೀಣ ಕ್ರೀಡಾಕೂಟ, ಬೀದಿ ಬದಿ ಶುಚಿತ್ವ, ಜಾಗೃತಿ ಸೇರಿದಂತೆ ಇತರೆ ಸ್ವಚ್ಛತಾ ಅಭಿಯಾನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಂಪೂರ್ಣ ಸ್ವಚ್ಛತಾ ಚಟುವಟಿಕೆಗಳಡಿಯಲ್ಲಿ ಸಾರ್ವಜನಿಕ ಸ್ಥಳ, ಎಲ್ಲಾ ಸರ್ಕಾರಿ ಕಚೇರಿಗಳು, ವಾಣಿಜ್ಯ-ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸಾರಿಗೆ ಕೇಂದ್ರಗಳು, ರಸ್ತೆ, ಹೆದ್ದಾರಿಗಳು, ರೈಲುಹಳಿಗಳು, ಅಭಯಾರಣ್ಯಗಳು, ನದಿ, ಸರೋವರ, ಕೊಳಗಳು, ಚರಂಡಿ ಸೇರಿದಂತೆ ವಿವಿಧ ಜಲಮೂಲಗಳ ಸ್ವಚ್ಛತೆ, ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಪರಂಪರೆಯ ತ್ಯಾಜ್ಯ ಶೇಖರಣಾ ತಾಣಗಳು, ಎಲ್ಲಾ ಶೌಚಾಲಯಗಳ ಸಮೀಪ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.ಸಫಾಯಿ ಮಿತ್ರ ಆರೋಗ್ಯ ಸುರಕ್ಷಾ ಶಿಬಿರ ಕಾರ್ಯಕ್ರಮಗಳಡಿ ಸಫಾಯಿ ಮಿತ್ರ, ನೈರ್ಮಲ್ಯ ಕಾರ್ಯಕರ್ತರಿಗೆ ಅರಿವು ಶಿಬಿರ ಏರ್ಪಡಿಸಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುವುದು, ಸೌಲಭ್ಯಗಳಿಗಾಗಿ ಫಲಾನುಭವಿಗಳನ್ನು ಗುರುತಿಸುವುದು, ಕುಂದುಕೊರತೆ ಅರ್ಜಿ ಸ್ವೀಕರಿಸಿ ತ್ವರಿತವಾಗಿ ಮಂಜೂರಾತಿ ನೀಡುವುದು, ಸ್ವೀಕೃತ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವುದು, ಸೌಲಭ್ಯ ವಿತರಣೆ, ಆರೋಗ್ಯ ತಪಾಸಣಾ ಶಿಬಿರಗಳ ಆಯೋಜಿಸಿ ಅಗತ್ಯ ಚಿಕಿತ್ಸೆ ನೀಡುವುದು, ಸ್ವಚ್ಛತಾ ಕಾರ್ಮಿಕರಿಗೆ ಪಿಪಿಇ ನೈರ್ಮಲ್ಯ ಕಿಟ್ ವಿತರಣೆ ಕಾರ್ಯಗಳನ್ನು ಸ್ವಚ್ಛತಾ ಪಾಕ್ಷಿಕ ಕಾಲಮಿತಿಯಲ್ಲಿಯೇ ನೆರವೇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸ್ವಚ್ಛತಾ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳುವ ಮೂರು ಗ್ರಾಪಂಗಳಿಗೆ ಪ್ರಶಸ್ತಿಗೆ ಅವಕಾಶವಿದೆ. ಇದಕ್ಕಾಗಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸಗಳನ್ನು ರಚನಾತ್ಮಕವಾಗಿ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಸ್ವಚ್ಛತಾ ಹೀ ಸೇವಾ ಆಂದೋಲನದಲ್ಲಿ ಇತರೆ ಜಿಲ್ಲೆಗಳಿಗಿಂತ ಹೆಚ್ಚಾಗಿ ಸ್ವಚ್ಛತಾ ಚವಟುವಟಿಕೆಗಳಲ್ಲಿ ಪಾಲ್ಗೊಂಡು ಚಾಮರಾಜನಗರ ಜಿಲ್ಲೆ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಮೂಲಕ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನಕ್ಕಾಗಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಪರಿಶ್ರಮ, ಪ್ರಯತ್ನ ಅವಶ್ಯವಾಗಿದೆ ಎಂದು ತಿಳಿಸಿದರು.ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ಎಡಿಸಿ ಗೀತಾ ಹುಡೇದ, ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಅಬಕಾರಿ ಉಪ ಆಯುಕ್ತ ನಾಗಶಯನ, ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಚಿದಂಬರ, ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.