ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾರ್ವಜನಿಕರಿಗೆ ಶುಚಿತ್ವ, ನೈರ್ಮಲ್ಯದ ಕುರಿತು ವ್ಯಾಪಕ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸ್ವಚ್ಛತಾ ಹೀ ಸೇವಾ ಆಂದೋಲನ’ ಕಾರ್ಯಕ್ರಮಕ್ಕೆ ಕೆಲ್ಲಂಬಳ್ಳಿಯಲ್ಲಿ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಪಂ ವ್ಯಾಪ್ತಿಯ ಕೆಲ್ಲಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಾಪಂ ಹಾಗೂ ಭೋಗಾಪುರ ಗ್ರಾಪಂ ಸಹಯೋಗದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಧ್ಯೇಯೋದ್ದೇಶದೊಂದಿಗೆ ಆಯೋಜಿಸಲಾಗಿದ್ದ ಸ್ವಚ್ಛತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅ.2ರವರೆಗೆ ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರು, ಮಹಿಳೆಯರು, ಮಕ್ಕಳಿಗೆ ಗ್ರಾಮಗಳ ಶುಚಿತ್ವ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದೇ ಸ್ವಚ್ಛತಾ ಸೇವೆ ಪಾಕ್ಷಿಕ ಆಚರಣೆಯ ಉದ್ದೇಶವಾಗಿದೆ. 1917ರಲ್ಲಿಯೇ ಸ್ವಚ್ಛತಾ ಆಂದೋಲನ ಪ್ರಾರಂಭವಾಗಿದೆ ಎಂದರು. ಗಾಂಧೀಜೀ ಗ್ರಾಮಗಳ ಸ್ವಚ್ಛತೆಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದನ್ವಯ ಪ್ರತಿವರ್ಷದಂತೆ ಈ ಬಾರಿಯೂ ಸ್ವಚ್ಛತಾ ಸಂಬಂಧ ವಿಶಿಷ್ಟ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಸ್ವಚ್ಛತೆಯೇ ಸೇವೆ ಶೀರ್ಷಿಕೆಯಡಿ ಆಯೋಜಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ ಎಂದರು.
ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆರೋಗ್ಯದ ಹಿತದೃಷ್ಠಿಯಿಂದ ಗ್ರಾಮೀಣ ಜನರು ಬಯಲು ಬಹಿರ್ದೆಸೆ ತ್ಯಜಿಸಿ ಶೌಚಾಲಯಗಳನ್ನು ಬಳಸಬೇಕು. ಸಾಮೂಹಿಕ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರವು ಲಕ್ಷಾಂತರ ರು. ವೆಚ್ಚ ಮಾಡುತ್ತಿದೆ. ಸ್ವಚ್ಛತೆಗಾಗಿ ಬಿಡುಗಡೆಯಾಗುವ ಅನುದಾನ ಸದ್ಬಳಕೆಯಾಗಬೇಕು. ಈ ಬಗ್ಗೆ ಮಹಿಳೆಯರು, ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಎಲ್ಲಾ ಗ್ರಾಪಂ ಸದಸ್ಯರು ಸ್ವಚ್ಛತಾ ಕಾರ್ಯಕ್ರಮಗಳ ನೇತೃತ್ವ ವಹಿಸಿ ಆಯಾ ಗ್ರಾಮಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.ಜಿಪಂ ಸಿಇಒ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಮೋನಾ ರೋತ್ ಮಾತನಾಡಿ, ಗಾಂಧಿ ಜಯಂತಿ ಅಂಗವಾಗಿ ಪ್ರತಿವರ್ಷ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಸ್ವಚ್ಛತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆಯ ಮೂಲಕ ಜಿಲ್ಲೆಯ 130 ಗ್ರಾಪಂಗಳಲ್ಲಿಯೂ ಸ್ವಚ್ಛತೆಗೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು.ಗ್ರಾಪಂ ಸದಸ್ಯ ಸೋಮಶೇಖರ್ ಮಾತನಾಡಿದರು. ತಾಪಂ ಇಒ ಪೂರ್ಣಿಮಾ ಸ್ವಚ್ಛತೆಯ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷೆ ರೂಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶಾಲಾಮಕ್ಕಳು ಅನುಪಯುಕ್ತ ವಸ್ತುಗಳಿಂದ ತಯಾರಿಸಿದ ವಿವಿಧ ಅಲಂಕಾರಿಕ ಕಲಾಕೃತಿಗಳನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನೊಳಗೊಂಡು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತೆ ಕುರಿತ ಜಾಗೃತಿ ಜಾಥಾಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಸಿರು ನಿಶಾನೆ ತೋರಿದರು. ನಂತರ ಗ್ರಾಮದ ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡರು.ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾನಸ, ಕುದೇರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕುಮುದಾ, ಭೋಗಾಪುರ ಗ್ರಾಪಂ ಸದಸ್ಯರು, ಕೆಲ್ಲಂಬಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಅಧ್ಯಕ್ಷರು, ಕೆಲ್ಲಂಬಳ್ಳಿ ಗ್ರಾಮಸ್ಥರು, ಮುಖಂಡರು, ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))