ಸ್ವಾಮಿ ರಘುವೀರಾನಂದ ಮಹಾರಾಜರ ಕಲ್ಪನೆಯೇ ಅಮೋಘ

| Published : Oct 06 2024, 01:24 AM IST

ಸಾರಾಂಶ

ರಘುವೀರಾನಂದ ಮಹಾರಾಜರು ತಡಸ ಬಳಿ ಜಾಗ ಖರೀದಿಸಿ ಶ್ರೇಷ್ಠ ತಾಣ ನಿರ್ಮಿಸುವ ಕನಸ್ಸು ಕಂಡಿದ್ದರು. ಇದಕ್ಕೆ ಭಕ್ತರು ಸಹ ಅವರ ಕನಸ್ಸಿಗೆ ಪೂರಕವಾಗಿ ಕೆಲಸ ಮಾಡುವಂತೆ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಹುಬ್ಬಳ್ಳಿ:

ಸ್ವಾಮಿ ರಘುವೀರಾನಂದ ಮಹಾರಾಜರು ದಿವ್ಯ ತ್ರಯರ ಸಂದೇಶ ಸಾರಲು ಹಾಗೂ ಸಮಾಜ ಜಾಗೃತಗೊಳಿಸಲು ಸನ್ನದ್ಧರಾಗಿದ್ದರು. ಅವರ ಕಲ್ಪನೆ ಅಮೋಘ ಮತ್ತು ಅದ್ಭುತ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮ ವತಿಯಿಂದ ಇಲ್ಲಿಯ ಕಲ್ಯಾಣ ನಗರದ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾಮಿ ರಘುವೀರಾನಂದ ಮಹಾರಾಜರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಘುವೀರಾನಂದ ಮಹಾರಾಜರು ತಡಸ ಬಳಿ ಜಾಗ ಖರೀದಿಸಿ ಶ್ರೇಷ್ಠ ತಾಣ ನಿರ್ಮಿಸುವ ಕನಸ್ಸು ಕಂಡಿದ್ದರು. ಇದಕ್ಕೆ ಭಕ್ತರು ಸಹ ಅವರ ಕನಸ್ಸಿಗೆ ಪೂರಕವಾಗಿ ಕೆಲಸ ಮಾಡುವಂತೆ ತಿಳಿಸಿದರು.

ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ತ್ಯಾಗ ಮತ್ತು ಸೇವೆಯ ಮೂಲಕ ಜನಮನ್ನಣೆ ಗಳಿಸಿದವರು ಸ್ವಾಮಿ ರಘುವೀರಾನಂದ ಮಹಾರಾಜರು. ಸಮಾಜದ ಉನ್ನತಿಗೆ ಅವರು ಅಮೋಘ ಕಾರ್ಯ ಮಾಡಿದ್ದಾರೆ. ಅವರ ಚಿಂತನೆಗಳು ಮುಂದುವರಿಯಲಿವೆ. ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಭಕ್ತ ಸಮೂಹವನ್ನೇ ಸಂಪಾದಿಸಿದ್ದರು. ಅವರು ನಮ್ಮ ಮಧ್ಯೆ ಇಲ್ಲವೆಂಬ ಭಾವನೆಯೇ ಇಲ್ಲ. ಅವರು ಚಿರಂತನ ಎಂದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಮಹಾರಾಜರು ದಾವಣಗೆರೆ ರಾಮಕೃಷ್ಣ ಮಿಷನ್‌ನ ಶ್ರೀ ತ್ಯಾಗೀಶ್ವರಾನಂದ ಮಹಾರಾಜರು, ಸಾಹಿತ್ಯ ಭಂಡಾರದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಮಾತನಾಡಿದರು.ಈ ವೇಳೆ ಸ್ವಾಮಿ ಪ್ರಕಾಶಾನಂದ ಮಹಾರಾಜ, ಸಿದ್ಧಲಿಂಗೇಶ್ವರ ಶ್ರೀ, ಮನಗುಂಡಿ ಬಸವಾನಂದ ಶ್ರೀ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮಾಜಿ ಶಾಸಕ ಡಿ.ಆರ್‌. ಪಾಟೀಲ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಡಾ. ನಾಗಲಿಂಗ ಮುರಗಿ ಸೇರಿದಂತೆ ಹಲವರಿದ್ದರು. ನೂತನ ಉತ್ತರಾಧಿಕಾರಿ ನೇಮಕ

ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಶ್ರೀರಘುವೀರಾನಂದ ಮಹಾರಾಜರ ಉತ್ತರಾಧಿಕಾರಿಯನ್ನಾಗಿ ಶ್ರೀಸ್ವಾಮಿ ತೇಜಸಾನಂದ ಮಹಾರಾಜರನ್ನು ನಿರ್ಭಯಾನಂದ ಸ್ವಾಮೀಜಿ ಘೋಷಿಸಿದರು. ರಘುವೀರಾನಂದ ಮಹಾರಾಜರು ತಮ್ಮ ಅನಾರೋಗ್ಯ ಹಿನ್ನೆಲೆಯಲ್ಲಿ ಬರೆಸಿಟ್ಟಿದ್ದ ಉಯಿಲು (ವಿಲ್‌) ಅನ್ನು ನಿರ್ಭಯಾನಂದ ಸ್ವಾಮೀಜಿ ಬಹಿರಂಗ ಸಭೆಯಲ್ಲಿ ಓದಿದರು. ನಂತರ ಸಚಿವ ಎಚ್.ಕೆ. ಪಾಟೀಲ ಅವರ ಮೂಲಕ ಉತ್ತರಾಧಿಕಾರಿ ಸ್ವಾಮಿ ತೇಜಸಾನಂದ ಮಹಾರಾಜರಿಗೆ ಹಸ್ತಾಂತರಿಸಿದರು.