ವಿವೇಕ ಭಾಷಣ ಸ್ಪರ್ಧೆ ಪ್ರಶಸ್ತಿ ಪ್ರದಾನ

| Published : Feb 10 2025, 01:46 AM IST

ಸಾರಾಂಶ

ಯಶಸ್ಸು ಎನ್ನುವುದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾದುದ್ದಲ್ಲ. ಅಂದುಕೊಂಡ ಹಾಗೆ ಕೆಲಸ ಮಾಡಿದರೆ ಅದು ಕೂಡ ಯಶಸ್ಸೇ

ಕನ್ನಡಪ್ರಭ ವಾರ್ತೆ ಮೈಸೂರುಟೀಂ ಮೈಸೂರು ವತಿಯಿಂದ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನದ ಅಂಗವಾಗಿ ವಿವೇಕ ಭಾಷಣ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ರಾಮಕೃಷ್ಣ ಆಧ್ಯಾತ್ಮಿಕ ಮತ್ತು ‌ನೈತಿಕ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.ಈ ಸ್ಪರ್ಧೆಯನ್ನು 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಯ 42 ಮಕ್ಕಳು ಭಾಗವಹಿಸಿದ್ದರು.ದಿವ್ಯ ಸಾನ್ನಿಧ್ಯವಹಿಸಿದ್ದ ಸ್ವಾಮಿ ಅಘಹರಾನಂದ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಾಲಕರು ಬೆಳೆಸಬೇಕಾದ ಮೌಲ್ಯಗಳ ಕುರಿತು ಹೇಳಿದರು. ಯಶಸ್ಸು ಎನ್ನುವುದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾದುದ್ದಲ್ಲ. ಅಂದುಕೊಂಡ ಹಾಗೆ ಕೆಲಸ ಮಾಡಿದರೆ ಅದು ಕೂಡ ಯಶಸ್ಸೇ ಎಂದು ಹೇಳುವ ಮೂಲಕ ಯಶಸ್ಸು ಎಂಬ ಪದದ ವ್ಯಾಖ್ಯಾನವನ್ನು ಸಂಕುಚಿತವಾಗಿಸುವದಕ್ಕಿಂತ ವಿಶಾಲ ದೃಷ್ಟಿಯಿಂದ ಕಾಣಬೇಕು. ಇದು ಪೋಷಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು.ಜೀವನದಲ್ಲಿ ಮೌಲ್ಯಯುತವಾಗಿ ಬದುಕುವುದು ಮುಖ್ಯ. ಅದನ್ನು ಮಕ್ಕಳಿಗೆ ಕಲಿಸಿ ಎಂದು ಕಿವಿ ಮಾತನ್ನು ಹೇಳಿದರು.ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಎಚ್.ಎನ್. ರವಿ ಅವರು ಸ್ವಾಮಿ ವಿವೇಕಾನಂದರು ಭಾರತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ, ಶ್ರೀರಾಮಕೃಷ್ಣ ಆಶ್ರಮದ ಧ್ಯೇಯಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.ತೀರ್ಪುಗಾರರಾದ ಕನ್ನಡ ಉಪನ್ಯಾಸಕ ಸಿ.ಎಸ್‌. ರಾಘವೇಂದ್ರ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಪ್ರತಿ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ ಎಂಬುದನ್ನು ತಿಳಿಸುವುದರೊಂದಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.ಸ್ವಾಮಿ ವಿವೇಕಾನಂದರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಕುಂದ ದೀಪಮನ್ಯು 10ನೇ ತರಗತಿ ಸಾದ್ವಿದ್ಯಾ ಶಾಲೆ, ದ್ವಿತೀಯ ಬಹುಮಾನ ಚಾರ್ವಿ ಶೆಟ್ಟಿ 9ನೇ ತರಗತಿ ವಿಜಯವಿಠಲ ಶಾಲೆ, ತೃತೀಯ ಬಹುಮಾನ ವಿಜಯ ವಿಠಲ ಶಾಲೆ 9ನೇ ತರಗತಿಯ ಎಸ್. ಪೂರ್ವಿಕಾ, ಸಮಾಧಾನಕರ ಬಹುಮಾನವನ್ನು ಬೆಟ್ಟದಪುರ ಎಸ್‌.ಎಂ.ಎಸ್‌. ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ರೋಸಾ ಹಾಗೂ ಹುಣಸೂರಿನ ಶಾಸ್ತ್ರೀ ವಿದ್ಯಾಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿ ಪುಣ್ಯ ಪಡೆದುಕೊಂಡರು.ವಿಜೇತರಿಗೆ ನಗದು ಬಹುಮಾನವಾಗಿ 5000 ರೂ., 3000, 2000, 500 ರೂ. ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ತಂಡದ ರಾಮಪ್ರಸಾದ್ ನಿರೂಪಿಸಿದರು. ಜ್ಯೋತಿ ರಾಂಪ್ರಸಾದ್ ಪ್ರಾರ್ಥಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.ಕಾರ್ಯಕ್ರಮಕ್ಕೆ ಬಂದವರನ್ನು ಟೀಂ ಮೈಸೂರು ತಂಡದ ಸದಸ್ಯರಾದ ಬಾಲಕೃಷ್ಣ ಸ್ವಾಗತಿಸಿದರು. ಟೀಂ ಮೈಸೂರು ತಂಡದ ಸದಸ್ಯ ಕಿರಣ್ ಜೈರಾಮ್ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.ತಂಡದ ಸದಸ್ಯರಾದ ಗೋಕುಲ್ ಗೋವರ್ಧನ್, ಮುರಳಿ, ಹೇಮಂತ್, ಅನಿಲ್ ಜೈನ್, ಬಸವರಾಜು, ಗಣೇಶ್, ಶಾಂತ ಕುಮಾರಿ, ತ್ರಿಮೂರ್ತಿ, ಮುರಳಿ, ಸುಧಾ, ಗೌರವ್ ಮುರಳಿ, ಜ್ಯೊತಿ ರಾಮಪ್ರಸಾದ್, ಉಮಾ ಹಿರಿಯಣ್ಣ, ಯಶಂತ್, ಬಸವರಾಜ್ ಸುಕೃತ ಇದ್ದರು.ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಅಘಹರಾನಂದಜೀ ಸಾನ್ನಿಧ್ಯವಹಿಸಿದ್ದರು. ಪಿರಿಯಾಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ತಂಡದ ಸದಸ್ಯರಾದ ಹಿರಿಯಣ್ಣ, ಪ್ರಸನ್ನ ರಾಜ್ ಗುರು ಇದ್ದರು.