ಸಾರಾಂಶ
ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ವಿಕಸನದ ಮೂಲಕ ಮಾನವನ ಉನ್ನತಿಗೆ ಹಾಗೂ ಆತ್ಮಶಕ್ತಿಗೆ ಮಾರ್ಗವನ್ನು ತೋರಿದವರು ಎಂದು ಗೋಕುಲ್ ಮುತ್ತು ನಾರಾಯಣ ಸ್ವಾಮಿ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ವಿಕಸನದ ಮೂಲಕ ಮಾನವನ ಉನ್ನತಿಗೆ ಹಾಗೂ ಆತ್ಮಶಕ್ತಿಗೆ ಮಾರ್ಗವನ್ನು ತೋರಿದವರು. ಅವರ ಬೋಧನೆಗಳ ಬೆಳಕಿನಲ್ಲಿ ವ್ಯಕ್ತಿತ್ವ ಅನ್ವೇಷಣೆಯನ್ನು ಪ್ರಾರಂಭಿಸುವುದು ಅತ್ಯಂತ ಮುಖ್ಯವಾದುದು. ಅವರ ಆದರ್ಶಗಳ ನೆಲೆಯ ಮೇಲೆ ನಡೆಯುವ ಅಭ್ಯಾಸಗಳ ಮೂಲಕ ವ್ಯಕ್ತಿತ್ವ ಬಲಗೊಳ್ಳುತ್ತದೆ ಎಂದು ಬೆಂಗಳೂರಿನ ಐಟ್ರಾನ್ ಸಂಸ್ಥೆಯ ಉತ್ಪನ್ನ ಅಭಿವೃದ್ಧಿ ವಿಭಾಗದ ನಿರ್ದೇಶಕ ಗೋಕುಲ್ ಮುತ್ತು ನಾರಾಯಣ ಸ್ವಾಮಿ ಹೇಳಿದರು.ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನಡೆದ, ವಿವೇಕವಾಣಿ ಸರಣಿಯ 35ನೇ ಉಪನ್ಯಾಸ ‘ಸ್ವಾಮಿ ವಿವೇಕಾನಂದರ ಬೋಧನೆಗಳ ಬೆಳಕಿನಲ್ಲಿ ವ್ಯಕ್ತಿತ್ವ ವಿಕಸನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಧ್ಯಾನ, ನೈತಿಕತೆ, ಧೈರ್ಯ ಮುಂತಾದ ಮೌಲ್ಯಗಳನ್ನು ಅನುಸರಿಸುವುದರಿಂದ ಒಬ್ಬನ ವ್ಯಕ್ತಿತ್ವ ವಿಕಸಿತವಾಗುತ್ತದೆ. ಆದರೆ, ಅವರ ಬೋಧನೆಗಳನ್ನು ಅನುಸರಿಸಲು ಪ್ರಯತ್ನ ಮಾತ್ರ ಸಾಲದು, ಅದು ಅನುಭವದ ಮೂಲಕ ಸಾಧ್ಯ. ವ್ಯಕ್ತಿತ್ವ ಅನ್ವೇಷಣೆಯ ಪಥದಲ್ಲಿ ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಅನುಸರಿಸಬೇಕಾಗಿದೆ ಎಂದರು.ಕಾಲೇಜು ಪ್ರಾಂಶುಪಾಲರಾದ ಡಾ. ರಾಮು ಎಲ್., ಮಂಗಳೂರಿನ ರಾಮಕೃಷ್ಣ ಮಿಷನ್ ಹಿರಿಯ ಸ್ವಯಂಸೇವಕ ಪರಮೇಶ್ವರ ಅಡಿಗ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು ಮತ್ತು ಪದವಿ ವಿದ್ಯಾರ್ಥಿಗಳು ಭಾಗವಹಿಸಿದರು.
ರಾಮಕೃಷ್ಣ ಮಿಷನ್ ನ ಕಾರ್ಯಕ್ರಮ ಸಂಯೋಜಕ ರಂಜನ್ ಬೆಳ್ಳಾರ್ಪಾಡಿ ಅವರು ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಸಂದೀಪ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.