ಹಾನಗಲ್ಲಿನಲ್ಲಿ ಗಣಪತಿ ಹಬ್ಬದ ಆಚರಣೆಯಲ್ಲಿ ನಡೆಯುತ್ತಿರುವ ಧರ್ಮ ಸಭೆಗೆ ಆಗಮಿಸುತ್ತಿದ್ದ ಹೂವಿನ ಹಡಗಲಿಯ ಅಭಿನವ ಹಾಲಶ್ರೀ ಮಹಾಸ್ವಾಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ ಅವರಿಗೆ ಹಾನಗಲ್ಲಿಗೆ ನಿರ್ಬಂಧ ಹೇರಿರುವುದು ಮಠಾಧೀಶರಿಗೆ ಮಾಡಿದ ಅವಮಾನ.

ಹಾನಗಲ್ಲ: ಹಾನಗಲ್ಲಿನಲ್ಲಿ ಗಣಪತಿ ಹಬ್ಬದ ಆಚರಣೆಯಲ್ಲಿ ನಡೆಯುತ್ತಿರುವ ಧರ್ಮ ಸಭೆಗೆ ಆಗಮಿಸುತ್ತಿದ್ದ ಹೂವಿನ ಹಡಗಲಿಯ ಅಭಿನವ ಹಾಲಶ್ರೀ ಮಹಾಸ್ವಾಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ ಅವರಿಗೆ ಹಾನಗಲ್ಲಿಗೆ ನಿರ್ಬಂಧ ಹೇರಿರುವುದು ಮಠಾಧೀಶರಿಗೆ ಮಾಡಿದ ಅವಮಾನ ಎಂದು ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಕಿಡಿ ಕಾರಿದರು.

ಭಾನುವಾರ ರಾತ್ರಿ ಹಾನಗಲ್ಲಿನ ಐತಿಹಾಸಿಕ ತಾರಕೇಶ್ವರ ಮಂದಿರದ ಬಯಲಿನಲ್ಲಿ ವಿರಾಟ್‌ ಹಿಂದೂ ಮಹಾಗಣಪತಿ ಸಂಘಟನೆ ಆಯೋಜಿಸಿದ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡಿ, ನಿರ್ಬಂಧ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಸಿದರು.

ಅನ್ಯ ಧರ್ಮವನ್ನು ಗೌರವಿಸುವ ಸೌಜನ್ಯ ಹಿಂದುಗಳದ್ದು. ಆದರೆ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಸಂಗತಿಗಳು ಮಾತ್ರ ನಿರಂತರ ನಡೆಯುತ್ತವೆ. ನಮ್ಮ ಆಚರಣೆಗಳಿಗೆ ಧಕ್ಕೆ ಬಂದರೂ ಕೂಡ ನಾವು ಸಹನೆ ತೋರಿಸಬೇಕಂತೆ, ಆದರೆ ನಮ್ಮ ಭಾವನೆಗಳಿಗೆ ಧಕ್ಕೆ ಮಾಡುವ ಘಟನೆಗಳಿಗೆ ಮಾತ್ರ ಈ ಸರ್ಕಾರಗಳಲ್ಲಿ ಕ್ರಮಗಳಿಲ್ಲ. ಇಡೀ ಜಗತ್ತಿಗೆ ಮಠಾಧೀಶರನ್ನು ನೀಡುವ ವಿಶ್ವವಿದ್ಯಾಲಯವನ್ನೇ ಆರಂಭಿಸಿದ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ ಕರ್ಮಭೂಮಿ ಹಾನಗಲ್ಲಿನಲ್ಲಿಯೇ ಒಬ್ಬ ಸ್ವಾಮಿ ಬರಲು ನಿರ್ಬಂಧ ಹೇರುವ ಜಿಲ್ಲಾಡಳಿತ ಎತ್ತ ಸಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿಗೆ ಬೀಗ: ಹಾವೇರಿ ಜಿಲ್ಲೆಯ ಮಠಾಧೀಶರನ್ನೊಳಗೊಂಡು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸುತ್ತೇವೆ. ಹೂವಿನಹಡಗಲಿ ಸ್ವಾಮೀಜಿ ಇಲ್ಲಿಗೆ ಕರೆಸಿ ಕಾರ್ಯಕ್ರಮ ಮಾಡೇ ಮಾಡುತ್ತೇವೆ ಎಂದು ಗುರುಲಿಂಗ ಮಹಾಸ್ವಾಮಿಗಳು ಎಚ್ಚರಿಸಿದರು.

ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಶ್ರೀಕಾಂತ ಹೊಸಕೇರಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಣೇಶ ಹಬ್ಬದ ಪಾತ್ರ ಪ್ರಮುಖವಾಗಿದೆ ಎಂಬುದನ್ನು ಇಲ್ಲಿ ನೆನಪಿಸುತ್ತೇವೆ. ಆದರೆ ಹಿಂದುಗಳ ಧರ್ಮಾಚರಣೆಯ ಭಾಗವಾದ ಗಣಪತಿ ಹಬ್ಬದ ಸಂದರ್ಭದಲ್ಲಿ ಮಠಾಧೀಶರು ಧರ್ಮ ಸಭೆಗೆ ಬರದಂತೆ ತಡೆಯುವುದು, ಹಿಂದೂ ಹಬ್ಬಗಳಿಗೆ ಅಡಚಣೆ ಮಾಡುತ್ತಿರುವ ದುಸ್ಸಾಹಸ ಸಹಿಸುವುದಿಲ್ಲ. ಇದಕ್ಕೆಲ್ಲ ಅಂಜುವುದಿಲ್ಲ. ಗ್ಯಾಂಗ್‌ರೇಪ್ ಮಾಡಿದವರು, ವಿಧಾನ ಸೌಧದ ಎದುರು ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಕೊಳ್ಳಲಾಗದ ಸರ್ಕಾರ ಹಿಂದೂ ಧರ್ಮಪ್ರಚಾರಕರ ಮೇಲೆ ದರ್ಪ ಮೆರೆಯುತ್ತಿರುವುದಕ್ಕೆ ಸರಿಯಾದ ಕಾಲಕ್ಕೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ಹಿಂದೂ ಧ್ವಜ ಅಭಿಯಾನ ಸಮಿತಿ ಸಂಸ್ಥಾಪಕ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿ, ಒಂದೆಡೆ ಮಠಾಧೀಶರು ಕಾರ್ಯಕ್ರಮಗಳಿಗೆ ಬಾರದಂತೆ ನಿರ್ಬಂಧ ಹೇರುವ ಸರ್ಕಾರ, ಇನ್ನೊಂದೆಡೆ ಅದೇ ಮಠಾಧೀಶರನ್ನು ಕರೆದು ವೇದಿಕೆಯಲ್ಲಿ ಕೂರಿಸಿ ಕಾರ್ಯಕ್ರಮ ಮಾಡುವುದು ಎಂತಹ ವಿಪರ್ಯಾಸ. ಹಿಂದೂ ಧರ್ಮದ ಆಚರಣೆಗಳಿಗೆ ಹಿನ್ನಡೆ ತರಲು ಮುಂದಾದರೆ ಅದಕ್ಕೆ ತಕ್ಕ ಉತ್ತರ ಕೊಡಲು ಸಿದ್ಧರಾಗಿದ್ದೇವೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ ಮಾತನಾಡಿ, ಕೂಡಲೇ ನಿರ್ಬಂಧ ತೆರವುಗೊಳಿಸಿ ನಮ್ಮ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡಿ ಎಂದು ತಿಳಿಸಿದರು.

ವಿರಾಟ ಹಿಂದೂ ಮಹಾಗಣಪತಿ ಸಂಘಟನೆಯ ಸದಸ್ಯ ಗಿರೀಶ ದೇಶಪಾಂಡೆ ವೇದಿಕೆಯಲ್ಲಿದ್ದರು. ರವಿಚಂದ್ರ ಪುರೋಹಿತ ಪ್ರಾಸ್ತಾವಿಕ ಮಾತನಾಡಿದರು. ರವಿ ಪುರದ ಸ್ವಾಗತಿಸಿದರು. ಮನೋಜ ಕಲಾಲ ಕಾರ್ಯಕ್ರಮ ನಿರೂಪಿಸಿದರು. ತುಳಜೇಶ ಮೂಲಿಮನಿ ವಂದಿಸಿದರು.

ಶ್ರೀಗಳಿಗೆ ಹಾಗೂ ವಕ್ತಾರರ ಮೇಲೆ ಹೇರಿದ ನಿರ್ಬಂಧ ತೆರವುಗೊಳಿಸುವವರೆಗೆ ಹಾಗೂ ಅವರನ್ನು ಕರೆಸಿ ಇಲ್ಲಿ ಕಾರ್ಯಕ್ರಮ ಮಾಡುವವರೆಗೆ ಗಣೇಶ ವಿಸರ್ಜನೆ ಮಾಡುವುದಿಲ್ಲ. ಅ. ೪ಕ್ಕೆ ಇದ್ದ ಗಣೇಶ ವಿಸರ್ಜನೆ ಮುಂದೂಡಲಾಗಿದೆ ಎಂದು ವಿರಾಟ್‌ ಹಿಂದೂ ಮಹಾಗಣಪತಿ ಸಂಘಟನೆ ಸಂಚಾಲಕ ರವಿ ಪುರೋಹಿತ ಹೇಳಿದರು.