ವಿಶೇಷಚೇತನರನ್ನು ಅನುಕಂಪದಿಂದ ನೋಡುವ ಬದಲು ಅವರಿಗೆ ಸಮಾನ ಅವಕಾಶ, ಅಗತ್ಯ ಸೌಲಭ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ. ಅವರನ್ನ ಮುಖ್ಯವಾಹಿನಿಗೆ ತರಬೇಕು. ಆದರೆ ಇಂತಹ ಸಾಮಾಜಿಕ ಕಳಕಳಿ ಹಾಗೂ ವಿಶೇಷ ಚೇತನರಿಗೆ ಸ್ಪೂರ್ತಿ ನೀಡುವ ಕಾರ್ಯಕ್ರಮಕ್ಕೆ ಬೆರಳೇಣಿಕೆಯಷ್ಟು ಜನರು ಇದ್ದಾರೆ ಎಂದು ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ವಿಶೇಷಚೇತನರನ್ನು ಅನುಕಂಪದಿಂದ ನೋಡುವ ಬದಲು ಅವರಿಗೆ ಸಮಾನ ಅವಕಾಶ, ಅಗತ್ಯ ಸೌಲಭ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ. ಅವರನ್ನ ಮುಖ್ಯವಾಹಿನಿಗೆ ತರಬೇಕು. ಆದರೆ ಇಂತಹ ಸಾಮಾಜಿಕ ಕಳಕಳಿ ಹಾಗೂ ವಿಶೇಷ ಚೇತನರಿಗೆ ಸ್ಪೂರ್ತಿ ನೀಡುವ ಕಾರ್ಯಕ್ರಮಕ್ಕೆ ಬೆರಳೇಣಿಕೆಯಷ್ಟು ಜನರು ಇದ್ದಾರೆ ಎಂದು ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಭಾನುವಾರ ನವ ಕಲ್ಯಾಣಜ್ಯೋತಿ ಜನಪರ ವೇದಿಕೆ ವತಿಯಿಂದ ಆಯೋಜಿಸಿದ್ದ 32 ನೇ ಬಿಳಿ ಊರುಗೋಲು ದಿನಾಚರಣೆ, ರಾಜ್ಯಮಟ್ಟದ ಸಂಗೀತ ಸ್ಪರ್ಧೆ, ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ದೃಷ್ಟಿದೋಷವುಳ್ಳವರಿಗೆ ಉಚಿತ ವಾಕಿಂಗ್ ಸ್ಟಿಕ್ ವಿತರಣೆ ಹಾಗೂ ವಿಶೇಷಚೇತನರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸಿನಿಮಾ ನಟರು ಭಾಗವಹಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಸೇರುತ್ತಾರೆ. ಆದರೆ ಸಾಮಾಜಿಕ ಕಳಕಳಿ ಹಾಗೂ ವಿಶೇಷಚೇತನರಿಗೆ ಪ್ರೇರಣೆ ನೀಡುವ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದರು. ಸೂಕ್ತ ಅವಕಾಶ ದೊರೆತರೆ ವಿಶೇಷಚೇತನರೂ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಬಲ್ಲರು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕೇವಲ ಅನುಕಂಪ ತೋರಿಸುವುದರಿಂದ ಅವರ ಬದುಕಿನಲ್ಲಿ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣ, ಉದ್ಯೋಗ, ಸಂಚಾರ ಹಾಗೂ ಸ್ವಾವಲಂಬಿ ಜೀವನಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಅನುಕಂಪಕ್ಕಿಂತ ಅವಕಾಶ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ವಕೀಲೆ ಹಾಗೂ ಕಾನೂನು ಸಲಹೆಗಾರರಾದ ಮಂಜುಳ ಮಾತನಾಡಿ, ವಿಶೇಷಚೇತನರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಬೇಕು. ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ರ್ಯಾಂಪ್ಗಳು, ಸುಗಮ ಪ್ರವೇಶ ವ್ಯವಸ್ಥೆ ಹಾಗೂ ವಿಶೇಷ ಶೌಚಾಲಯಗಳನ್ನು ಒದಗಿಸಬೇಕು. ಸೌಲಭ್ಯಗಳ ಸಮರ್ಪಕ ಬಳಕೆಯ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದರು. ವಿಶೇಷಚೇತನರನ್ನು ಕರುಣೆಯಿಂದ ನೋಡುವ ಬದಲು ಗೌರವದಿಂದ ಕಾಣಬೇಕು. ಅವರ ಹಕ್ಕುಗಳನ್ನು ರಕ್ಷಿಸಿ, ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ದೃಷ್ಟಿದೋಷವುಳ್ಳವರಿಗೆ ಉಚಿತ ವಾಕಿಂಗ್ ಸ್ಟಿಕ್ ವಿತರಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇದೆ ವೇಳೆ ನವ ಕಲ್ಯಾಣಜ್ಯೋತಿ ಜನಪರ ವೇದಿಕೆ ರಾಜ್ಯಾಧ್ಯಕ್ಷ ಜೆ. ಸಿ. ಸಿದ್ದರಾಮ್, ರಾಜ್ಯ ಖಜಾಂಚಿ ಅಶೋಕ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಜಯಲಕ್ಷ್ಮೀ, ರಾಜ್ಯ ಉಪಾಧ್ಯಕ್ಷೆ ಸವಿತ ಪಟೇಲ್, ಯಶೋಧ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಶಕ್ತಿ ಸ್ಪಂದನ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ರತ್ನಗೌಡ, ರಾಜ್ಯ ಉಪಾಧ್ಯಕ್ಷೆ ಕುಸುಮ, ಸಹನ ಚಾರಿಟಬಲ್ ಟ್ರಸ್ಟ್ ಶಿವಕುಮಾರ್, ಸಹನ ಚಾರಿಟಬಲ್ ಟ್ರಸ್ಟ್ ಶಿವಕುಮಾರ್, ಹನುಮಮ್ಮ ಚೆಲುವಯ್ಯ ಕಲ್ಯಾಣ ಮಂಟಪದ ಮಾಲೀಕ ಹೆಚ್.ಆರ್. ವಾಸುದೇವ್, ಗೌರಿಕೊಪ್ಪಲು ಮಂಜಪ್ಪ, ಕಾರು ಮಾಲೀಕ ಕುಮಾರ್ ಇತರರು ಉಪಸ್ಥಿತರಿದ್ದರು. ರಾಜ್ಯಾಧ್ಯಕ್ಷ ನಿಡುಗರಹಳ್ಳಿ ಸಿದ್ದಪ್ಪ ಕಾರ್ಯಕ್ರಮ ಸ್ವಾಗತಿಸಿದರು.