ಸ್ವಾಮೀಜಿಗಳು ಸಮಾಜದ ಅಂಕು, ಡೊಂಕು ತಿದ್ದುವಂತಹ ಕಾರ್ಯ ಮಾಡಬೇಕು

| Published : Aug 20 2024, 01:49 AM IST

ಸಾರಾಂಶ

ಸಮಾಜವು ಹಾದಿ ತಪ್ಪುತ್ತಿದ್ದಾಗ ಅದನ್ನು ಸರಿದಾರಿಗೆ ತೆಗೆದುಕೊಂಡು ಹೋಗುವುದರ ಜತೆಗೆ ಅದರಲ್ಲಿರುವ ಅಂಕು,ಡೊಂಕುಗಳನ್ನು ತಿದ್ದುವಂತಹ ಕಾರ್ಯ ಸ್ವಾಮೀಜಿಗಳಾದವರು ಮಾಡಬೇಕಾಗುತ್ತದೆ. ಅಂತಹ ಚಿಂತನೆಯನ್ನು ವೇ.ಬಸಯ್ಯ ಶಾಸ್ತ್ರಿಗಳು ಮಾಡುತ್ತಿದ್ದಾರೆ ಎಂದು ಬಿಲ್ಲಮಾದ್ರಿ ಸಂಸ್ಥಾನ ಬ್ರಹನ್ಮಠ ಗುಂಡಕನಾಳದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಮಾಜವು ಹಾದಿ ತಪ್ಪುತ್ತಿದ್ದಾಗ ಅದನ್ನು ಸರಿದಾರಿಗೆ ತೆಗೆದುಕೊಂಡು ಹೋಗುವುದರ ಜತೆಗೆ ಅದರಲ್ಲಿರುವ ಅಂಕು,ಡೊಂಕುಗಳನ್ನು ತಿದ್ದುವಂತಹ ಕಾರ್ಯ ಸ್ವಾಮೀಜಿಗಳಾದವರು ಮಾಡಬೇಕಾಗುತ್ತದೆ. ಅಂತಹ ಚಿಂತನೆಯನ್ನು ವೇ.ಬಸಯ್ಯ ಶಾಸ್ತ್ರಿಗಳು ಮಾಡುತ್ತಿದ್ದಾರೆ ಎಂದು ಬಿಲ್ಲಮಾದ್ರಿ ಸಂಸ್ಥಾನ ಬ್ರಹನ್ಮಠ ಗುಂಡಕನಾಳದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಭಂಟನೂರ ಗ್ರಾಮದಲ್ಲಿ ವೇದಮೂರ್ತಿ ಬಸಯ್ಯ ಶಾಸ್ತ್ರಿಗಳವರ ಗದ್ದಿಗೆ ಮೇಲೆ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ ಹಾಗೂ ನಂದಿ ಪ್ರತಿಷ್ಠಾಪನೆ ಅಂಗವಾಗಿ ಭಾನುವಾರ ಏರ್ಪಡಿಸಲಾದ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

|

ಶಾಹಪುರ ಕುಂಬಾರಗೇರಿ ಮಠದ ಷಟಸ್ಥಲ ಬ್ರಹ್ಮಿ ಸೋಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸನಾತನ ಧರ್ಮದ ನಡಿಗೆಯ ದಾರಿಯಲ್ಲಿ ಎಲ್ಲರೂ ಸಾಗಬೇಕಿದೆ. ಇಂದಿನ ಆಚಾರ ವಿಚಾರಗಳು ತದ್ವಿರುದ್ಧವಾಗಿ ನಡೆದುಕೊಳ್ಳುವಂತೆ ಮಾಡಿವೆ. ಈ ಹಿಂದೆ ಬಡತನವಿದ್ದರೂ ಕೂಡಾ ಎಲ್ಲರೂ ಮೈತುಂಬಾ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಿದ್ದರು. ಆದರೆ, ಇಂದು ಎಲ್ಲ ರೀತಿಯ ಶ್ರೀಮಂತಿಕೆ ಇದ್ದರೂ ಕೂಡಾ ಹರಕು ಪ್ಯಾಂಟ್‌, ಹರಕು ಅಂಗಿ ತೊಟ್ಟುಕೊಂಡು ತಿರುಗಾಡುವ ದೃಶ್ಯಗಳು ಅನೇಕ ನಗರ ಪಟ್ಟಣಗಳಲ್ಲಿ ಕಾಣುತ್ತಿದ್ದೇವೆ. ಇದನ್ನು ಯಾರೇ ಪ್ರಶ್ನಿಸಿದರೂ ಕೂಡಾ ಇದು ಈಗೀನ ಪ್ಯಾಶನ್ ಎಂಬ ಶಬ್ದ ಹೊರಬರುತ್ತಿದೆ. ಇದನ್ನು ನೋಡಿದಏ ನಮ್ಮ ಜನರೆಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವುದು ಕಾಣುತ್ತಿದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ. ನಮ್ಮ ಆಚಾರ ವಿಚಾರಗಳನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ವೇ.ಬಸಯ್ಯ ಶಾಸ್ತ್ರೀಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತ ಬಂದಿದ್ದರ ಫಲವಾಗಿ ಭಂಟನೂರ ಗ್ರಾಮದ ಭಕ್ತರಿಗೆ ದೇವರ ಸ್ವರೂಪಿಗಳಾಗಿ ಕಾಣುತ್ತಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಭಕ್ತವೃಂದದವರೆಲ್ಲರೂ ಸಾಗಿ ಜೀವನವನ್ನು ಪವಿತ್ರಗೊಳಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮಕ್ಕೂ ಮುಂಚೆ ವಿವಿಧ ವಾಧ್ಯಮೇಳಗಳೊಂದಿಗೆ ಪೂಜ್ಯರನ್ನು ಹಾಗೂ ಗಣ್ಯವ್ಯಕ್ತಿಗಳನ್ನು ವೇದಿಕೆಗೆ ಕರೆತರಲಾಯಿತು. ವಾಸ್ತು ತಜ್ಞರು ಹಾಗೂ ಆಯುರ್ವೇದಿಕ್ ಪಂಡಿತರಾದ ದೇವದುರ್ಗದ ದೊಡ್ಡಯ್ಯ ತಾತನವರು, ವೈದಿಕ ನೇತೃತ್ವವನ್ನು ಆಮಯ್ಯ ಸ್ವಾಮಿಗಳು ಹಿರೇಮಠ ಬಂಟನೂರು, ಕಾರ್ಯಕ್ರಮದ ನೇತೃತ್ವವನ್ನು ಮಲ್ಲಯ್ಯಸ್ವಾಮಿ ತಾಳಿಕೋಟಿ(ಜಾಲಹಳ್ಳಿ), ಗುರುಬಸಯ್ಯ ಬೆಳವಟ್ಟಿಮಠ ಹಾಗೂ ಅವರ ಪರಿವಾರ ಬಂಧುಗಳು ಉಪಸ್ಥಿತರಿದ್ದರು.

ಸ್ವಾಮಿಗಳಾದವರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಕಡೆಗೆ ಗಮನವಿರಬೇಕು. ಅಹಂಭಾವ ಎಂಬುವುದು ಇರಬಾರದು. ಇದು ಸಮಾಜಕ್ಕೆ ಕೆಡಕು ಬಯಸಿದಂತಾಗುತ್ತದೆ. ಅಲ್ಲದೇ ಅವರ ಕಾವಿತನದ ಗೌರವ ಕಳೆಗುದುತ್ತ ಸಾಗಲಿದೆ. ಚಿನ್ನ ಕಸದಲ್ಲಿದ್ದರೂ ಕೂಡಾ ಮಿಂಚುತ್ತದೆ. ಅರ್ಥೈಸಿಕೊಂಡು ನಡೆದರೇ ಒಳ್ಳೆಯ ಭವಿಷ್ಯ ಸಮಾಜದಲ್ಲಿ ಸಿಗಲಿದೆ.

-ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,

ಗುಂಡಕನಾಳ ಬ್ರಹನ್ಮಠ.