ಮಠಗಳ ಸ್ವಾಮೀಜಿ ರಕ್ತ ಸಂಬಂಧ ಹೆಚ್ಚಿಸುವುದಕ್ಕಿಂತ ಭಕ್ತರ ಸಮೂಹ ಹೆಚ್ಚಿಸಿಕೊಳ್ಳಬೇಕು ಎಂದು ಸಾಣೆಹಳ್ಳಿ ತರಳಬಾಳು ಪೀಠದ ಡಾ. ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ರಾಣಿಬೆನ್ನೂರು: ಮಠಗಳ ಸ್ವಾಮೀಜಿ ರಕ್ತ ಸಂಬಂಧ ಹೆಚ್ಚಿಸುವುದಕ್ಕಿಂತ ಭಕ್ತರ ಸಮೂಹ ಹೆಚ್ಚಿಸಿಕೊಳ್ಳಬೇಕು ಎಂದು ಸಾಣೆಹಳ್ಳಿ ತರಳಬಾಳು ಪೀಠದ ಡಾ. ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಐರಣಿ ಗ್ರಾಮದ ಐರಾವತ ಹೊಳೆಮಠ ಮಹಾಸಂಸ್ಥಾನದಲ್ಲಿ ಸೋಮವಾರ ಪಟ್ಟಾಭಿಷೇಕ (ಸನ್ಯಾಸ ದೀಕ್ಷೆ) ಮಹೋತ್ಸವ, ತುಲಾಭಾರ ಹಾಗೂ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ನಾಡಿನಲ್ಲಿ ಮಠಗಳಿಗೆ ಹಾಗೂ ಸ್ವಾಮಿಗಳಿಗೆ ಕೊರತೆಯಿಲ್ಲ. ಆದರೆ ಪೀಠದ ಮೇಲೆ ಕೂತ ನಂತರ ಅಣ್ಣನ ಮಗ, ತಮ್ಮನ ಮಗ, ಅಕ್ಕನ ಮಗ ಎಂಬ ರಕ್ತ ಸಂಬಂಧವನ್ನು ಬಿಟ್ಟು ಭಕ್ತ ಸಂಬಂಧ ಗಣವನ್ನು ಹೊಂದಬೇಕು.ಸ್ವಾಮೀಜಿ ಆದ ಮೇಲೆ ಜಾತಿ, ಮತ, ಪಕ್ಷ, ರಾಜಕೀಯ ದೂರವಿಟ್ಟು ಜನರಿಗೆ ವೈಚಾರಿಕತೆ, ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಸಮಾಜದಲ್ಲಿ ಜಾತಿ ತಾರತಮ್ಯ ಹೆಚ್ಚಾಗಿದೆ. ಅದನ್ನು ನಮ್ಮ ಕೈಯಿಂದ ದೂರ ಮಾಡಿಸುವ ಕೆಲಸ ಆಗಬೇಕು. ಮಠಗಳು ಮೌಢ್ಯತೆಯಿಂದ ಹೊರಬಂದು ಸಮ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇತ್ತೀಚೆಗೆ ರಾಜಕೀಯ ಎಂಬುದು ಜಾತಿ ಧರ್ಮಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ. ಅದನ್ನು ನಾವುಗಳು ಖಂಡಿಸಬೇಕು ಎಂದರು.ಭಕ್ತರಿಗೆ ಅಂಜಿ ನಡೆಯುವ ಸ್ವಾಮೀಜಿ ಹಾಗೂ ಸ್ವಾಮೀಜಿಗೆ ಅಂಜಿ ನಡೆಯುವ ಭಕ್ತರು ಇದ್ದಾಗ ಸಮಾಜ ಸರಿಯಾದ ರೀತಿಯಲ್ಲಿ ಸಾಗುತ್ತದೆ. ಮನುಷ್ಯ ಸ್ವಾತಿಕ ಗುಣವನ್ನು ಅಳವಡಿಸಿಕೊಂಡು ಮುನ್ನಡೆದು ಸಾರ್ಥಕ ಬದುಕನ್ನು ಕಂಡುಕೊಳ್ಳಬೇಕು ಎಂದರು.ಉಪಸಭಾಪತಿ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ, ಗದಗ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ, ತೆಲಗಿ ಶಂಭುಲಿಂಗಾಶ್ರಮದ ಪೂರ್ಣಾನಂದ ಸ್ವಾಮೀಜಿ, ಗಂಗಾಪುರ ಸಿದ್ಧಾರೂಢ ಆಶ್ರಮದ ಮರುಳಶಂಕರ ಸ್ವಾಮೀಜಿ, ಹೋತನಹಳ್ಳಿಯ ಶಂಕರಾನಂದ ಸ್ವಾಮೀಜಿ, ತುಮ್ಮಿನಕಟ್ಟಿ ಪದ್ಮಸಾಲಿ ಪೀಠದ ಪ್ರಭುಲಿಂಗ ಸ್ವಾಮೀಜಿ, ಹದಡಿ ಚಂದ್ರಗಿರಿಮಠ ಮುರಳೀಧರ ಸ್ವಾಮೀಜಿ, ಮಂಗಳೂರಿನ ಮುಸ್ಲಿಂ ಜಮಾತ ಮೌಲಾನ ಅಬುಸುಫ್ಯಾನ್ ಮದನಿ ಸಾನ್ನಿಧ್ಯ ವಹಿಸಿದ್ದರು.ಮಠದ ಸಂಚಾಲಕ ಬಾಬಣ್ಣ ಶೆಟ್ಟರ, ಮಂಜುನಾಥ ಓಲೇಕಾರ ಸೇರಿದಂತೆ ಇತರರಿದ್ದರು.