ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಸ್ವರಾನುಭೂತಿ ಕಾರ್ಯಕ್ರಮ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮಂಗಳೂರು: ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಸ್ವರಾನುಭೂತಿ ಕಾರ್ಯಕ್ರಮ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ನಿವೃತ್ತ ಐ.ಆರ್.ಎಸ್. ಅಧಿಕಾರಿ, ರಾಷ್ಟ್ರೀಯ ಸೀಮಾ ಸುಂಕ, ಪರೋಕ್ಷ ತೆರಿಗೆ ಮತ್ತು ಮಾದಕ ವಸ್ತುಗಳ ಅಕಾಡೆಮಿ ಮಾಜಿ ಮಹಾ ನಿರ್ದೇಶಕ ಡಾ.ಎಂ.ಸುಬ್ರಹ್ಮಣ್ಯಂ ಚಾಲನೆ ನೀಡಿ ಮಾತನಾಡಿ, ಮಂಗಳೂರಿಗೆ ಬರುವಾಗ ನನಗೆ ಹಳೆಯ ನೆನಪುಗಳು ಬರುತ್ತಿವೆ. ಏಕೆಂದರೆ ೫ಕ್ಕೂ ಹೆಚ್ಚು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ್ದೇನೆ. ಸಂಗೀತ ಭಾರತಿ ಫೌಂಡೇಶನ್ ದೇಶದ ಪ್ರತಿಷ್ಠಿತ ಕಲಾವಿದರ ಸಂಗೀತ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸುತ್ತಾ ಬರುತ್ತಿದೆ. ಈ ಮೂಲಕ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುವುದಲ್ಲದೆ, ಸಂಗೀತಪ್ರಿಯರಿಗೆ ಸಂಗೀತ ಆಸ್ವಾದನೆಯ ಅವಕಾಶ ಕಲ್ಪಿಸುತ್ತಿದೆ. ನನಗೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ವಿಶೇಷ ಅನುಭವ ಸಿಗುತ್ತದೆ ಎಂದರು.

ಖ್ಯಾತ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ನರೇಂದ್ರ ಎಲ್.ನಾಯಕ್, ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್, ಕೋಶಾಧಿಕಾರಿ ಕರುಣಾಕರ ಬಳ್ಕೂರು, ಸದಸ್ಯ ರಮೇಶ್ ಕೆ.ಜಿ. ಇದ್ದರು.

ಸಂಗೀತ ಭಾರತಿ ಪ್ರತಿಷ್ಠಾನದ ಸದಸ್ಯ ಅಂಕುಶ್ ಎನ್.ನಾಯಕ್ ನಿರೂಪಿಸಿದರು.

ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಪ್ರಸಿದ್ದ ಕರ್ನಾಟಕೀ ಶಾಸ್ತ್ರೀಯ ಸಂಗೀತ ಕಲಾವಿದ ಮುರಳೀಧರ ಶೆಣೈ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು. ವಯೋಲಿನ್‌ನಲ್ಲಿ ಕಾಸರಗೋಡಿನ ಗಣರಾಜ್ ಕಾರ್ಲೆ, ಮೃದಂಗದಲ್ಲಿ ಲಯರತ್ನ ಪಾಲಕ್ಕಾಡ್ ಕೆ.ಎಸ್. ಮಹೇಶ್ ಕುಮಾರ್, ಘಟಂನಲ್ಲಿ ವೆಲ್ಲತ್ತಂಜೂರು ಶ್ರೀಜಿತ್, ಸಿತಾರ್‌ನಲ್ಲಿ ಶ್ರಾವರಿ ಸಾಥ್ ನೀಡಿದರು. ಉತ್ತರಾರ್ಧದಲ್ಲಿ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಚತುರಂಗಿ-ತಾರ್ ವಾದನ ನಡೆಯಿತು. ಕಲಾವಿದ ಕೋಲ್ಕೋತಾದ ಪಂಡಿತ್ ದೇಬಶಿಷ್ ಭಟ್ಟಾಚಾರ್ಯ ಈ ವಿಶೇಷ ವಾದನ ಕಾರ್ಯಕ್ರಮ ನಡೆಸಿಕೊಟ್ಟರು. ತಬ್ಲಾದಲ್ಲಿ ಬೆಂಗಳೂರಿನ ಪಂಡಿತ್ ರವೀಂದ್ರ ಯಾವಗಲ್ ಸಾಥ್ ನೀಡಿದರು.