ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳ ಮಾನಸಿಕ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗಾಗಿ ಸರ್ಕಾರಗಳು ಪಲ್ಸ್ ಪೋಲಿಯೋ ಮಾದರಿಯಲ್ಲಿ ಶಾಲೆಗಳಲ್ಲಿ ಸ್ವರ್ಣ ಬಿಂದು ಪ್ರಾಶನ ಲಸಿಕೆ ಹಾಕಬೇಕು ಎಂದು ಚಂದ್ರವನ ಆಶ್ರಮ, ಬೇಬಿಗ್ರಾಮದ ಶ್ರೀದುದಂಡೇಶ್ವರದ ಮಠದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ಬೇಬಿ ಗ್ರಾಮದ ಶ್ರೀದುದಂಡೇಶ್ವರ ಮಠದ ಲಿಂಗೈಕ್ಯ ಶ್ರೀಮರೀದೇವರು ಸ್ವಾಮೀಜಿಗಳ ಗದ್ದುಗೆ ಆವರಣದಲ್ಲಿ ಆದಿ ಆಯುರ್ವೇದ ಆಸ್ಪತ್ರೆ, ಡಿಎಂಎಸ್ ಚಂದ್ರವನ ಆಶ್ರಮದ ಸಯೋಹದಲ್ಲಿ ನಡೆದ ಡಿಎಂಎಸ್ ಜ್ಞಾನಕುಟೀರ ಶಾಲೆಯ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವ ಋಷಿಗಳ ಆಶ್ರಮದಲ್ಲಿ ಆಯುರ್ವೇದ ಶಾಸ್ತ್ರ ಸ್ವರ್ಣಬಿಂದು ಪ್ರಾಶನ ಬಹಳ ಮುಖ್ಯವಾಗಿತ್ತು. ಇದರಿಂದ ಮಕ್ಕಳ ಮಾನಸಿಕ, ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಬಹಳ ಪ್ರಮುಖವಾಗಲಿದೆ. ಮಕ್ಕಳಿಗೆ ಜ್ಞಾಪಕ ಶಕ್ತಿ, ಮಾನಸಿಕ ಶಕ್ತಿ ವೃದ್ಧಿಸಲೆಂದು ಸ್ವರ್ಣಬಿಂದು ಪ್ರಾಶನ ಮಾಡಲಾಗುತ್ತಿದೆ ಎಂದರು.

ನಮ್ಮ ಸರ್ಕಾರಗಳು ಸಹ ಪಲ್ಸ್ ಪೋಲಿಯೋ ಮಾದರಿಯಲ್ಲಿ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಹಾಕಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲು ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.


12 ವರ್ಷಕ್ಕೊಮ್ಮೆ ಬರುವ ಪುಷ್ಯ ನಕ್ಷತ್ರದ ವಿಶೇಷವಾದ ದಿನದೊಂದು ಸ್ವರ್ಣಬಿಂದು ಪ್ರಾಶನ ಮಾಡಲಾಗಿದೆ. ಸ್ವರ್ಣಬಿಂದು ಹಾಕಿಸಿಕೊಂಡು ಮಕ್ಕಳು ಇನ್ನು ಮುಂದೆ ತಮ್ಮ ಬಾಯಿಂದ ಕೆಟ್ಟಶಬ್ಧ ಬಳಕೆ ಮಾಡಬಾರದು, ಕೆಟ್ಟ ಆಲೋಚನೆಗಳನ್ನು ದೂರವಿಡಬೇಕು, ದೊಡ್ಡ ಸಾಧನೆ ಮಾಡುವ ಗುರಿಯೊಂದಿಗೆ ಸಾಧನೆ ಕಿಚ್ಚನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಮಠಗಳು ನಡೆಸುತ್ತಿರುವ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ತ್ರಿನೇತ್ರಸ್ವಾಮೀಜಿಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಶಾಲೆ ಆರಂಭಿಸಿದ್ದಾರೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ದೊಡ್ಡಮಟ್ಟದ ಸಾಧನೆಯ ಗುರಿ ಹೊಂದಬೇಕು, ಮುಂಜಾನೆ ಬೇಗ ಎದ್ದು ಓದುವ, ಯೋಗಾ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣುವ ಗುಣಗಳನ್ನು ಬೆಳೆಸಿಕೊಳ್ಳಬೇಕು, ಸಂಸ್ಕೃತಿಯ ಜತೆಗೆ ಸಂಸ್ಕಾರ ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಇದೇ ವೇಳೆ ಡಿಎಂಎಸ್ ಜ್ಞಾನ ಕುಟೀರ ಶಾಲೆಯ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಹಾಕಲಾಯಿತು.

ಈ ವೇಳೆ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಡಿಎಂಎಸ್ ಶಾಲೆ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಆದಿ ಆಯುರ್ವೇದ ಆಸ್ಪತ್ರೆ ಡಾ.ನಾಗೇಶ್, ಡಾ.ಸುಜನ, ಉದ್ಯಮಿ ರಂಗರಾಜು, ಸುಮಸಂಜಯ್, ವಿಶ್ವನಾಥ್ ಸೇರಿದಂತೆ ಹಲವರು ಹಾಜರಿದ್ದರು.