ಸಾರಾಂಶ
ಅರಸೀಕೆರೆ: ತಾಲೂಕಿನ ಕಲ್ಗುಂಡಿ ಗ್ರಾಮದಲ್ಲಿ ಗೌರಿಹಬ್ಬದ ತದಿಗೆದಿನದಂದು ಪ್ರತಿಷ್ಠಾಪಿಸಿದ್ದ ಸ್ವರ್ಣಗೌರಿದೇವಿ ವಿಸರ್ಜನಾ ಮಹೋತ್ಸವವು ಭಾನುವಾರ ಸಂಜೆ 6.30ಕ್ಕೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಪೂರ್ಣವಾಗಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ತಾಲೂಕಿನ ಕಲ್ಗುಂಡಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧಿ ಪಡೆದಿರುವ ಸ್ವರ್ಣಗೌರಿದೇವಿಯನ್ನು ಪ್ರತಿವರ್ಷ ಗೌರಿಹಬ್ಬದಂದು ಈಶ್ವರಚಾರ್ ವಂಶಸ್ಥರಾದ ವಸಂತಚಾರ್ ಭೂತಾಳೆ ಮರ ದಲ್ಲಿನ ಸ್ವರ್ಣಗೌರಿದೇವಿಯನ್ನು ಕಡಲೆ ಹಿಟ್ಟು, ಬೆಣ್ಣೆಯಿಂದ ತಿದ್ದಿ ಪ್ರತಿಮೆ ಮಾಡಿ ಗ್ರಾಮದ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಗ್ರಾಮಸ್ಥರು ಪೂಜಿಸುವ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದು ಬಂದಿದೆ.ಈ ಜಾತ್ರಾ ಮಹೋತ್ಸವವು ನಾಡಿನಲ್ಲಿ ಹೆಚ್ಚಿನ ಜನಾಕರ್ಷಣೆ ಹೊಂದಿರುವ ಕಾರಣ, ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿ ತಮ್ಮ ಹರಕೆ, ಕಾಣಿಕೆಗಳನ್ನು ತೀರಿಸುವ ಪರಿಪಾಠವು ನಡೆದು ಬಂದಿದೆ.
ವಿಸರ್ಜನಾ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇವಾಲಯದಲ್ಲಿ ಗುಗ್ಗಳ ಸೇವೆ, ಚೋಮದೇವರಿಂದ ಅಷ್ಟದಿಕ್ಕುಗಳಿಗೂ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವರ್ಣಗೌರಿದೇವಿ ಮೆರವಣಿಗೆಯನ್ನು ಮಂಗಳ ವಾದ್ಯಗಳೊಂದಿಗೆ ನಡೆಸಲಾಯಿತು. ಸಾವಿರಾರು ಭಕ್ತರ ಸಮೂಹಕ್ಕೆ ವಿಶೇಷವಾಗಿ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಸ್ವರ್ಣಗೌರಮ್ಮದೇವಿ ಮೂರ್ತಿಯನ್ನು ಚಂದ್ರಮಂಡಲದ ಉತ್ಸವದಲ್ಲಿ ಕುಳ್ಳರಿಸಿ ಗ್ರಾಮದ ಮನೆ, ಮನೆಗಳಲ್ಲಿ ತೆರಳಿ ಭಕ್ತರಿಂದ ಮಡಿಲಕ್ಕಿ ಸಮರ್ಪಣೆ ಹಾಗೂ ಪೂಜಾ ಕಾರ್ಯವನ್ನು ಪ್ರತಿವರ್ಷದ ಸಂಪ್ರದಾಯದಂತೆ ನೆರವೇರಿಸಲಾಯಿತು, ಜಾತ್ರಾ ಮಹೋತ್ಸವದಲ್ಲಿ ಗಂಡು ಮಕ್ಕಳು ತಮ್ಮ ಹರಕೆ ತಿರಿಸಲು ಉರುಳು ಸೇವೆಯನ್ನು ನಡೆಸಿದರೆ, ಕನ್ಯಾಮಣಿಗಳು ಆರತಿ ಸೇವೆಯನ್ನು ಶ್ರೀದೇವಿಗೆ ಸರ್ಮಪಿಸಿದರು. ಭಕ್ತರ ನಿರೀಕ್ಷೆಯ ಕುರುಹು ಕೇಳುವ ಕಾರ್ಯ ಆರಂಭವಾಗಿ ಸುಮಾರು ೫೦೦ ಕೆ.ಜಿ. ತೂಕದ ಪಲ್ಲಕ್ಕಿಯಲ್ಲಿ ಸ್ವರ್ಣಗೌರಮ್ಮ ದೇವಿಯನ್ನು ಕುಳ್ಳರಿಸಿ ಸಹಸ್ರಾರು ಭಕ್ತರು ಕುರುಹು ಕೇಳಿದರು. ನಂತರ ಗ್ರಾಮದ ಮುಂದಿನ ಕಲ್ಯಾಣಿಯಲ್ಲಿ ಸಂಜೆ 6.30ಕ್ಕೆ ಸ್ವರ್ಣಗೌರಿ ಮೂರ್ತಿಯ ವಿಸರ್ಜನೆಯನ್ನು ಶಾಸ್ತ್ರೋಕ್ತವಾಗಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಗ್ರಾಮದ ಮುಖಂಡರು ಹಾಗೂ ವಕೀಲರಾದ ಕೆ.ವಿ.ಹಿರಿಯಣ್ಣ, ಗಂಗಾಧರಪ್ಪ, ಚಂದ್ರಪ್ಪ, ಗೋಪಾಲ್‌ರಾವ್, ರಮೇಶ್, ಪುಟ್ಟಪ್ಪ, ಯತೀಶ್, ಪ್ರಸನ್ನ, ದಾಸಪ್ಪ, ಗಿರೀಶ್, ಪರಮೇಶ್ವರಪ್ಪ ಸೇರಿದಂತೆ ಸ್ವರ್ಣಗೌರಮ್ಮದೇವಿ ಸೇವಾ ಬಳಗದ ಯುವ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿದರು.