ಸ್ವಸ್ಥ ಸಮಾಜ ನಿರ್ಮಾಣ ಆರ್‌ಎಸ್‌ಎಸ್ ಮೂಲ ಉದ್ದೇಶ : ಅರಳಿಹಳ್ಳಿ ಪ್ರಕಾಶ್

| Published : Oct 22 2024, 12:13 AM IST

ಸ್ವಸ್ಥ ಸಮಾಜ ನಿರ್ಮಾಣ ಆರ್‌ಎಸ್‌ಎಸ್ ಮೂಲ ಉದ್ದೇಶ : ಅರಳಿಹಳ್ಳಿ ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪ್ರಾರಂಭವಾದ ದಿನದಿಂದ ಇಂದಿನವರೆಗೆ ಅನೇಕ ಸವಾಲು, ಸಮಸ್ಯೆ ದಿಟ್ಟವಾಗಿ ಎದುರಿಸಿ ತನ್ನ ಸೇವಾ ಕಾರ್ಯ ಮೂಲಕ ನಿರಂತರವಾಗಿ ವಿಸ್ತರಿಸಿ ಬೆಳೆದುಕೊಂಡು ಬಂದಿದೆ ಎಂದು ಸಂಘದ ವಿಭಾಗ ಶಾರೀರಿಕ್ ಪ್ರಮುಖ್ ಅರಳಿಹಳ್ಳಿ ಪ್ರಕಾಶ್ ಹೇಳಿದರು.

ಕನ್ನಡಪ್ರಭವಾರ್ತೆ ಭದ್ರಾವತಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪ್ರಾರಂಭವಾದ ದಿನದಿಂದ ಇಂದಿನವರೆಗೆ ಅನೇಕ ಸವಾಲು, ಸಮಸ್ಯೆ ದಿಟ್ಟವಾಗಿ ಎದುರಿಸಿ ತನ್ನ ಸೇವಾ ಕಾರ್ಯ ಮೂಲಕ ನಿರಂತರವಾಗಿ ವಿಸ್ತರಿಸಿ ಬೆಳೆದುಕೊಂಡು ಬಂದಿದೆ ಎಂದು ಸಂಘದ ವಿಭಾಗ ಶಾರೀರಿಕ್ ಪ್ರಮುಖ್ ಅರಳಿಹಳ್ಳಿ ಪ್ರಕಾಶ್ ಹೇಳಿದರು.

ವಿಜಯ ದಶಮಿ ಅಂಗವಾಗಿ ನಗರದಲ್ಲಿ ಏರ್ಪಡಿಸಲಾಗಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡು ನಂತರ ಹಳೇನಗರದ ಶ್ರೀ ವೀರಶೈವ ಸಭಾ ಭವನದಲ್ಲಿ ಜರುಗಿದ ಸಂಘದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಮೂಲ ಉದ್ದೆಶ ಸಮಾಜ ಸೇವಾ ಕಾರ್ಯ. ಅದಕ್ಕಾಗಿ ಶಾಖೆಯಲ್ಲಿ ವ್ಯಕ್ತಿ ನಿರ್ಮಾಣ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯ ಮಾಡುತ್ತಿದೆ. ವ್ಯಕ್ತಿ ಉತ್ತಮವಾದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಸಮಾಜದ ಯಾವ ಕ್ಷೇತ್ರವನ್ನೂ ಬಿಡದೆ ಸಂಘವು ತನ್ನ ಸೇವಾ ಚಟುವಟಿಕೆ ಕಾರ್ಯ ಮಾಡುತ್ತಾ ಬಂದಿದೆ. ದೇಶಕ್ಕೆ ಸಂಕಷ್ಟ ಎದುರಾದಾಗ ಸಂಘವು ಬೆನ್ನೆಲುಬಾಗಿ ನಿಂತಿದೆ. ಪ್ರಕೃತಿ ವಿಕೋಪ, ನೆರೆ ಹಾವಳಿ, ಬರ, ಯುದ್ಧ ಸನ್ನಿವೇಶ ಮುಂತಾದ ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಿದೆ ಎಂದು ಸ್ಮರಿಸಿದರು.ಸಮಾಜದಲ್ಲಿ ಐದು ಪರಿವರ್ತನೆಗಳನ್ನು ತರಲು ಉದ್ದೇಶಿಸಿ ಅದರಂತೆ ಸಂಘ ಕಾರ್ಯೋನ್ಮುಖವಾಗುತ್ತಿದೆ. ಜಾತಿ ಮನೆಗಳು ಹೋಗಿ ಹಿಂದೂ ಮನೆಗಳಾಗಬೇಕು, ಸಮಾಜದಲ್ಲಿ ಸಾಮರಸ್ಯ ನಿರ್ಮಾಣ ಮಾಡಬೇಕು, ಸ್ವದೇಶಿ ಚಿಂತನೆ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ಅನುಷ್ಠಾನಕ್ಕೆ ತರಬೇಕು, ನಾಗರಿಕ ಶಿಷ್ಟಾಚಾರದೊಂದಿಗೆ ಸಂವಿಧಾನದ ನಿಯಮದಂತೆ ನಡೆದುಕೊಳ್ಳಬೇಕು, ಸಂಘದ ಕಾರ್ಯ ಚಟುವಟಿಕೆಗಳನ್ನು ಹಂತ ಹಂತವಾಗಿ ಹೆಚ್ಚಿಸುತ್ತಾ ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತದೆ ಎಂದರು.

ನಗರ ಸಂಘ ಚಾಲಕ್ ಬಿ.ಎಚ್ ಶಿವಕುಮಾರ್ ಉಪಸ್ಥಿತಿರಿದ್ದರು. ಇದಕ್ಕೂ ಮೊದಲು ಹಳೇನಗರದ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆಕರ್ಷಕ ಗಣವೇಶಧಾರಿ ಸ್ವಯಂ ಸೇವಕರ ಪಥ ಸಂಚಲನ ಆರಂಭಗೊಂಡು ತಾಲೂಕು ಕಚೇರಿ ರಸ್ತೆ, ರಂಗಪ್ಪ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ, ಮಾಧವಾಚಾರ್ ವೃತ್ತ, ಎನ್‌ಎಸ್‌ಟಿ ರಸ್ತೆ, ವಾಸವಿ ಮಹಲ್ ರಸ್ತೆ, ಬಸವೇಶ್ವರ ವೃತ್ತ, ಕುಂಬಾರರ ಬೀದಿ, ಉಪ್ಪಾರ ಬೀದಿ, ಶ್ರೀ ಹಳದಮ್ಮ ದೇವಿ ಬೀದಿ, ನಂತರ ಹೊಸ ಸೇತುವೆ ರಸ್ತೆಯಲ್ಲಿ ಸಾಗಿ ಕಂಚಿನ ಬಾಗಿಲು ವೃತ್ತದ ಮೂಲಕ ಶ್ರೀ ವೀರಶೈವ ಸಭಾಭವನ ತಲುಪಿತು.