ಕಾರ್ಕಳದ ಸ್ವಸ್ತಿ ಕಾಮತ್‌ ಎಸ್ಸೆಸ್ಸೆಲ್ಸಿ ಟಾಪರ್‌

| Published : May 03 2025, 12:17 AM IST

ಸಾರಾಂಶ

ಕಾರ್ಕಳ ಗಣಿತನಗರದ ಜ್ಞಾನಸುಧಾ ಹೈಸ್ಕೂಲಿನ ಸ್ವಸ್ತಿ ಕಾಮತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 625/625 ಅಂಕಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅವರು ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸಂಪಿಗೆಕಟ್ಟೆಯ ಜನಾರ್ದನ್ ಕಾಮತ್ ಹಾಗೂ ಶಾಂತಿ ಕಾಮತ್ ದಂಪತಿ ಪುತ್ರಿ.

ಓದಿಗೆ ಸಹಕಾರಿಯಾದ ಉಚಿತ ಬಸ್‌ ಸೌಕರ್ಯ । ಈಕೆಗೆ ವೈದ್ಯೆಯಾಗುವ ಆಸೆ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಗಣಿತನಗರದ ಜ್ಞಾನಸುಧಾ ಹೈಸ್ಕೂಲಿನ ಸ್ವಸ್ತಿ ಕಾಮತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 625/625 ಅಂಕಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅವರು ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸಂಪಿಗೆಕಟ್ಟೆಯ ಜನಾರ್ದನ್ ಕಾಮತ್ ಹಾಗೂ ಶಾಂತಿ ಕಾಮತ್ ದಂಪತಿ ಪುತ್ರಿ.ತಂದೆಯ ಜನ್ಮದಿನಕ್ಕೆ ಮಗಳ ಉಡುಗೊರೆ:

ತಂದೆ ಜನಾರ್ದನ್ ಕಾಮತ್, ಶುಕ್ರವಾರ ಜನ್ಮದಿನ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮ ಗಳಿಸಿರುವುದು ತಂದೆಯ ಪ್ರೋತ್ಸಾಹಕ್ಕೆ ನನ್ನ ಉಡುಗೊರೆ ಎಂದು ಸ್ವಸ್ತಿ ಕಾಮತ್ ಹೇಳಿದ್ದಾರೆ.ಬಸ್‌ ಸಮಸ್ಯೆ:

ಕಾರ್ಕಳ ತಾಲೂಕಿನ ಎಳ್ಳಾರೆಯಲ್ಲಿ ಬಸ್ ವ್ಯವಸ್ಥೆಯಿಲ್ಲದ ಕಾರಣ ಸ್ವಸ್ತಿ ಕಾಮತ್, ತನ್ನ ಅಜ್ಜಿ ಮನೆ ಕಾರ್ಕಳದ ಕಣಜಾರು ಗ್ರಾಮದ ಹಡಂಕೋಳಿ ಮೆಲ್ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಅಜ್ಜಿ ಮನೆಯ ಭಾಗದಲ್ಲಿ 2024-25ರಲ್ಲಿ ಸರ್ಕಾರಿ ಬಸ್ ಆರಂಭವಾಗಿತ್ತು. ಸದ್ಯ ಸ್ತ್ರೀಯರಿಗೆ ಉಚಿತ ಬಸ್‌ ಸೌಲಭ್ಯವಿದ್ದು, ಇದು ತನಗೆ ತುಂಬಾ ಸಹಕಾರವಾಗಿತ್ತು ಎನ್ನುತ್ತಾರೆ ಸ್ವಸ್ತಿ ಕಾಮತ್.

ನನ್ನೂರಿಗೂ ಬಸ್ ಬರಲಿ:ಕಾರ್ಕಳ, ಅಜೆಕಾರು, ಕಡ್ತಲ, ಎಳ್ಳಾರೆ, ಹಿರಿಯಡ್ಕ ಮಾರ್ಗವಾಗಿ ಬಸ್ ಇಲ್ಲ. ಈ ಹಿನ್ನೆಲೆಯಲ್ಲಿ ನನ್ನ ಓದಿಗಾಗಿ ಅಜ್ಜಿ ಮನೆಗೆ ಬರಬೇಕಾಯಿತು. ನಮ್ಮೂರು ಎಳ್ಳಾರೆಗೂ ಸರ್ಕಾರಿ ಬಸ್ ಬರಲಿ, ಅಲ್ಲಿಯೂ ನನ್ನಂತೆ ತುಂಬಾ ವಿದ್ಯಾರ್ಥಿಗಳು ಓದುವವರಿದ್ದಾರೆ ಅವರಿಗೂ ಸಹಾಯವಾಗಲಿ ಎನ್ನುತ್ತಾರೆ ಸ್ವಸ್ತಿ ಕಾಮತ್.ಮಲ್ಲಿಗೆ ಕೃಷಿ ಜೊತೆ ತಾಯಿಗೂ ಸಹಾಯ:

ತಂದೆ ಜನಾರ್ದನ್ ಕಾಮತ್ ಗೋಕರ್ಣದಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಶಾಂತಿ ಕಾಮತ್ ಮಲ್ಲಿಗೆ ಕೃಷಿ ಮಾಡುತ್ತಾರೆ. ಬೆಳಗ್ಗಿನ ಜಾವ ಅಮ್ಮನ ಜೊತೆ 2 ಚೆಂಡು ಮಲ್ಲಿಗೆ ಹೂವನ್ನು ಕಟ್ಟಿ, ಬಳಿಕ ಶಾಲೆಗೆ ಹೋಗುತ್ತಿದ್ದಳು.

ಅಕ್ಕನೇ ಪ್ರೇರಣೆ:ಸ್ವಸ್ತಿ ಕಾಮತ್ ಅವರ ಸಹೋದರಿಯರಾಧ ಭಕ್ತಿ ಕಾಮತ್ ಹಾಗೂ ಭವ್ಯ ಕಾಮತ್ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದರು. ಇವರೇ ಈ ಸಾಧನೆಗೆ ಪ್ರೇರಣೆ ಎನ್ನುತ್ತಾರೆ. ಸ್ವಸ್ತಿ. ಈಕೆಯ ಸಾಧನೆಗೆ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಎರಡು ಲಕ್ಷ ರು. ಪ್ರೋತ್ಸಾಹ ಧನ ನೀಡಿದ್ದಾರೆ.-------------ಡಾಕ್ಟರ್ ಅಗಬೇಕೆಂಬ ಕನಸಿದೆ. ನನ್ನ ಓದಿಗೆ ಅಕ್ಕಂದಿರೇ ಪ್ರೇರಣೆ. ಸರ್ಕಾರದ ಉಚಿತ ಬಸ್ ವ್ಯವಸ್ಥೆ ನನಗೆ ಶಾಲೆಗೆ ಹೋಗಲು ನೆರವಾಯ್ತು. ನಿತ್ಯ 5 ಗಂಟೆ ಓದುತ್ತಿದ್ದೆ. ಇದು ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ.। ಸ್ವಸ್ತಿ ಕಾಮತ್, ಎಸ್‌ಎಸ್‌ಎಲ್‌ಸಿ ಟಾಪರ್