ಸಾರಾಂಶ
ಲೋಕಸಭಾ ಚುನಾವಣೆ ನಿಮಿತ್ತ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದಲ್ಲಿ ನರೇಗಾ ಕಾಯಕ ಬಂಧುಗಳು ಹಾಗೂ ಕೂಲಿಕಾರರಿಂದ ಸ್ವೀಪ್ ಜಾಥಾ ಕಾರ್ಯಕ್ರಮ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದಲ್ಲಿ ನರೇಗಾ ಕಾಯಕ ಬಂಧುಗಳು ಹಾಗೂ ಕೂಲಿಕಾರರಿಂದ ಬುಧವಾರ ಸ್ವೀಪ್ ಜಾಥಾ ಕಾರ್ಯಕ್ರಮ ನಡೆಸಲಾಯಿತು.ಸ್ವೀಪ್ ಜಾಥಾವು ಬೇಳೂರು ಗ್ರಾಮದ ಬೆಟ್ಟದ ಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗಿ ಹಿರೇಸಿಂಧೊಗಿ ರಸ್ತೆಯಲ್ಲಿರುವ ಬಸ್ ನಿಲ್ದಾಣದವರೆಗೆ ಕಡ್ಡಾಯ ಮತದಾನ, ನಮ್ಮ ಮತ ನಮ್ಮ ಹಕ್ಕು ಇತ್ಯಾದಿ ಘೋಷಣೆಗಳೊಂದಿಗೆ ಸಾಗಿ ಮುಕ್ತಾಯಗೊಂಡಿತು.
ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ ಮಾತನಾಡಿ, ಮೇ 7ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೇ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿ ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದಿಂದ ಸ್ವೀಪ್ ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು ಕೂಲಿಕಾರರು ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ಕಳೆದ ಬಾರಿಗಿಂತ ಈ ಬಾರಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಜಿಲ್ಲೆಯ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸೋಣ ಎಂದರು.ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್ ಮಾತನಾಡಿ, ಮತದಾನ ಪವಿತ್ರವಾದ ಕಾರ್ಯ. ಮತದಾನದ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು. ಸ್ವೀಪ್ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲಾ ನರೇಗಾ ಕೂಲಿಕಾರರು ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸಬೇಕು ಎಂದರು.
ನಂತರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭ ತಾಲೂಕು ಸ್ವೀಪ್ ಸಮಿತಿ ಸದಸ್ಯ ಬಸವರಾಜ ಬಳಿಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣೇಂದ್ರಸ್ವಾಮಿ, ಕರವಸೂಲಿಗಾರ ಮರ್ದಾನಸಾಬ, ಡಿಇಒ ನಿಂಗಜ್ಜ ಕರಿಗಾರ, ಕಾಯಕ ಬಂಧುಗಳು, 320ಕ್ಕೂ ನರೇಗಾ ಕೂಲಿಕಾರರಿದ್ದರು.20ಕೆಪಿಎಲ್22 ಬೇಳೂರು ಗ್ರಾಮದಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.