ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸಿಹಿ ವಿತರಣೆ

| Published : Aug 16 2025, 02:01 AM IST

ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸಿಹಿ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ೭೯ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮರಿಗೌಡ ಚಾರಿಟೇಬಲ್ ಟ್ರಸ್ಟ್‌ನಿಂದ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

ಚನ್ನಪಟ್ಟಣ: ೭೯ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮರಿಗೌಡ ಚಾರಿಟೇಬಲ್ ಟ್ರಸ್ಟ್‌ನಿಂದ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

ನಗರದ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಿಹಿ ವಿತರಿಸಿ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಅಂಗವಾಡಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಮಲ್ಲೇಶ್ ಗುರೂಜಿ ಮಾತನಾಡಿ, ಮರಿಗೌಡ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎಚ್.ಎಂ.ನಾಗೇಶ್ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಾಲೂಕಿನ ಸರ್ಕಾರಿ ಶಾಲೆಗಳ ೨೨ ಸಾವಿರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಿಹಿ ವಿತರಿಸುತ್ತಿದ್ದಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ನಾಗೇಶ್ ಈಗಾಗಲೇ ತಮ್ಮ ಟ್ರಸ್ಟ್ ಮೂಲಕ ತಾಲೂಕಿನ ವಿವಿಧ ಶಾಲೆಯ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್ ಸೇರಿದಂತೆ ಕಲಿಕಾ ಸಾಮಗ್ರಿ ವಿತರಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ವಿತರಿಸುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಇದಲ್ಲದೇ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಯೋಜನೆ ಇಟ್ಟುಕೊಂಡಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.

ತಹಸೀಲ್ದಾರ್ ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಬೇಕು. ಎಷ್ಟೇ ಎತ್ತರಕ್ಕೆ ಏರಿದರೂ ಮಾನವೀಯತೆ ಮರೆಯಬಾರದು. ದೊಡ್ಡವರಾದ ಮೇಲೆ ತಾವು ಸಹ ಕಲಿತ ಶಾಲೆಗೆ, ಇತರರಿಗೆ ನೆರವಾಗಬೇಕು. ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಮಾತನಾಡಿ, ಹಣವಿರುವ ಎಲ್ಲರೂ ಸಮಾಜಸೇವೆ ಮಾಡುವುದಿಲ್ಲ. ಆದರೆ, ತಾವು ಗಳಿಸಿದ ಹಣದಲ್ಲಿ ಕೊಂಚ ಸಮಾಜಕ್ಕೆ ನೀಡಬೇಕು ಎಂದು ನಾಗೇಶ್ ಸಮಾಜಸೇವೆಗೆ ಮುಂದಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮುಖ್ಯ ಉದ್ದೇಶ ಹೊಂದಿದ್ದಾರೆ. ಅವರು ಇನ್ನು ಹೆಚ್ಚಿನ ರೀತಿಯಲ್ಲಿ ಸಮಾಜಸೇವೆ ನಡೆಸಲು ಆ ಭಗವಂತ ಶಕ್ತಿ ನೀಡಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಬಿಇಒ ರಾಮಲಿಂಗಯ್ಯ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಮಾಜಿ ಅಧ್ಯಕ್ಷ ಮಲುವೇಗೌಡ, ಉದ್ಯಮಿ ಜಗದೀಶ್, ಸಿ.ರಾಜಶೇಖರ್, ಶಿವಮಾದು, ಮಲ್ಲೇಶ್ ಇತರರಿದ್ದರು.

ಪೊಟೋ೧೪ಸಿಪಿಟಿ೧:

ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಸಿಹಿ ವಿತರಿಸಲಾಯಿತು.