ಸಾರಾಂಶ
ದಾವಣಗೆರೆ: ಕರ್ನಾಟಕ ಯುವ ಕಾಂಗ್ರೆಸ್ ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ವಂಚನೆ ಹಿನ್ನೆಲೆ ಪಕ್ಷದ ಚುನಾವಣಾಧಿಕಾರಿ ಫಲಿತಾಂಶ ತಡೆಹಿಡಿದು, ಮರುಎಣಿಕೆ ಕೈಗೊಳ್ಳುವಂತೆ ದಕ್ಷಿಣ ಕ್ಷೇತ್ರದ ಯುವ ಮುಖಂಡ ಸೈಯದ್ ಸುಹೇಲ್ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯತ್ವ ಮತಗಳ ಮರುಎಣಿಕೆ ಮಾಡಿ ಅರ್ಹ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂದರು.
ಅಲಿ ರೆಹಮತ್ ಪೈಲ್ವಾನ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, 28ರಿಂದ 30 ಸಾವಿರ ಮತ ಸದಸ್ಯತ್ವ ಪಡೆದಿದ್ದು, ಸದಸ್ಯತ್ವ ಮೊತ್ತ ಸಹ ಪಾವತಿಸಿದ್ದಾರೆ. ಆದರೆ, ಫಲಿತಾಂಶದಲ್ಲಿ 10067 ಮತ ಪಡೆದಿರುವುದಾಗಿ ಫಲಿತಾಂಶ ಬಂದಿದೆ. ಸದಸ್ಯತ್ವದ ಮತಗಳ ಮರುಎಣಿಕೆ ಮಾಡಬೇಕು. ಸದಸ್ಯತ್ವ ಪರಿಶೀಲನೆ ವೇಳೆ ಮೊದಲು ಹೊನ್ನಾಳಿ ಕ್ಷೇತ್ರದ 22 ಸಾವಿರ ಸದಸ್ಯತ್ವಗಳನ್ನು ಅಂಗೀಕರಿಸಿರುವುದಾಗಿ ಹೇಳಲಾಗಿತ್ತು. ಆದರೆ, ಘೋಷಣೆ ವೇಳೆ 7 ಸಾವಿರ ಮತಗಳನ್ನು ತಡೆ ಹಿಡಿದಿದ್ದಾರೆ. ಅದರಲ್ಲಿ 5 ಸಾವಿರ ಮತ ಅಲಿ ರೆಹಮತ್ ಪೈಲ್ವಾನ್‌ದ್ದಾಗಿವೆ ಎಂದರು.
ವಿಭಾಗೀಯ ಚುನಾವಣಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಚುನಾವಣಾಧಿಕಾರಿ ಗಮನಕ್ಕೆ ಈ ವಿಚಾರ ತಂದಿದ್ದೇವೆ. ಫಲಿತಾಂಶದ ನಮಗೆ ತೃಪ್ತಿ ಇಲ್ಲ. ಮತಗಳ ಬಗ್ಗೆ ನಮಗೆ ಖಚಿತವಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಲಿ ರೆಹಮತ್ ಪೈಲ್ವಾನ್ ಮಾತ್ರ ಅರ್ಹರೆಂಬ ಸಂಪೂರ್ಣ ವಿಶ್ವಾಸ ನಮಗಿದೆ. 12 ವರ್ಷದಿಂದ ಕಾಂಗ್ರೆಸ್ ಕೆಲಸ ಮಾಡಿರುವ ಅಲಿ ರೆಹಮತ್ 2 ಅವಧಿಗೆ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಜಿಲ್ಲಾದ್ಯಂತ ಯುವ ಜನರೊಂದಿಗೆ ಕೆಲಸ ಮಾಡಿದವರು. ಚುನಾವಣಾ ಸಮಿತಿ ಯಾಕೆ ಹೀಗೆ ಮಾಡಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಪಕ್ಷದ ಡಿ.ಮನೋಜ, ಜಾವೀದ್, ಮಹಮ್ಮದ್ ಬಿಲಾಲ್, ಸುಹಾಸ್ ಇತರರು ಇದ್ದರು.