ಶಿಕ್ಷಣ ಪ್ರಗತಿಯ ಸಂಕೇತ: ಪುರುಷೋತ್ತಮಾನಂದ ಶ್ರೀ

| Published : Jun 09 2024, 01:34 AM IST

ಸಾರಾಂಶ

ಮಸ್ಕಲ್ ಗ್ರಾಮದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಉಪ್ಪಾರ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚೆಚ್ಚು ವಿದ್ಯಾವಂತರನ್ನಾಗಿಸುವತ್ತ ಗಮನ ಕೊಡಬೇಕು ಎಂದು ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಆಶೀರ್ವಚನ ನೀಡಿ, ಉಪ್ಪಾರ ಸಮುದಾಯ ಶ್ರೇಷ್ಠ ಹಿನ್ನೆಲೆಯಿರುವ ಸಮುದಾಯವಾಗಿದೆ. ಆರ್ಥಿಕ, ರಾಜಕೀಯ, ಶೈಕ್ಷಣಿಕ ಪ್ರಗತಿಯತ್ತ ಸಾಗಬೇಕಿದೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಆದಷ್ಟು ವಿದ್ಯಾಭ್ಯಾಸ ಮಾಡಿಸುವತ್ತ ದಿಟ್ಟ ಹೆಜ್ಜೆ ಇಡಬೇಕಿದೆ. ಶಿಕ್ಷಣ ಪ್ರಗತಿ ಸಂಕೇತವಾಗಿದ್ದು ಎಲ್ಲಾ ಸಮಸ್ಯೆ ದೂರ ಮಾಡಿಕೊಳ್ಳಲು ದಾರಿದೀಪವಾಗಿದೆ. ಈಗಾಗಲೇ ಹೊಸದುರ್ಗದ ಭಗೀರಥ ಗುರುಪೀಠದಲ್ಲಿ 60ಅಡಿ ಏಕಶಿಲೆ ಭಗೀರಥರ ಪ್ರತಿಮೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಮಸ್ಕಲ್ ಗ್ರಾಮದಲ್ಲಿ ಭಗೀರಥ ಪುತ್ಥಳಿ ಕೊಡಿಸಲಾಗುವುದು. ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರೆಯುವುದೇ ಜನಾಂಗದ ಅಭಿವೃದ್ಧಿಯಾಗಿದ್ದು ಯಾರೂ ಸಹ ಯಾವುದೇ ದ್ವೇಷ, ಅಸೂಯೆ ಹತ್ತಿರಕ್ಕೂ ಬಿಟ್ಟುಕೊಳ್ಳದೆ ಪ್ರಗತಿಯತ್ತ ಮುನ್ನಡೆಯಿರಿ ಎಂದರು.

ಭಗೀರಥ ಜಯಂತಿ ಪ್ರಯುಕ್ತ ಗ್ರಾಮದಲ್ಲಿ ಭಗೀರಥರ ಭಾವ ಚಿತ್ರ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ, ಕಳಸ ಹೊತ್ತು ಸಾಗಿ ಮೆರವಣಿಗೆಗೆ ಕಳೆ ತಂದರು. ಈ ವೇಳೆ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಆಲೂರು ರಾಮಣ್ಣ, ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಉಪ್ಪಾರ ಸಂಘದ ಉಪಾಧ್ಯಕ್ಷ ವಿ.ಎಲ್.ಗೌಡ, ಗುಣಾರಹಳ್ಳಿ ಶೇಖರಪ್ಪ,ಮೈಲಾರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೊಲ್ಲಮ್ಮ, ಮಂಜುಳಾ ವೀರೇಶ್, ಕಲಾವತಿ ತಿಪ್ಪೇಸ್ವಾಮಿ, ವೈ ನಾಗರಾಜ್, ಧನಂಜಯ, ವೀರೇಶ್, ದಯಾಸಾಗರ್, ಕೋಟಿ,ಬಾಲು, ಮುಂತಾದವರಿದ್ದರು.