ಸಾರಾಂಶ
ಗಾಯನ ಕಲೋತ್ಸವ, ಶ್ರೀ ಶನಿಪ್ರಭಾವ ನಾಟಕದ ತರಬೇತಿ ಕಾರ್ಯಕ್ರಮಕ್ಕೆ ರಾಮಣ್ಣಸ್ವಾಮಿ ಚಾಲನೆ
ಕನ್ನಡಪ್ರಭ ವಾರ್ತೆ ಹಿರಿಯೂರು
ಸಂಗೀತ ಮತ್ತು ನಾಟಕಗಳು ಸಂಸ್ಕೃತಿ, ಸಂಸ್ಕಾರ, ರೀತಿ-ನೀತಿ, ಭಾಷೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವ ಸಂಸ್ಕೃತಿಯ ಪ್ರತೀಕವಾಗಿ ಉಳಿದಿವೆ ಎಂದು ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಣ್ಣಸ್ವಾಮಿ ಹೇಳಿದರು.ತಾಲೂಕಿನ ಬ್ಯಾರಮಡು ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹೊಸದುರ್ಗ ಶ್ರೀ ಗುರು ರಾಘವೇಂದ್ರ ಸಾಂಸ್ಕೃತಿಕ ಕಲಾ ಸಂಘ, ಶ್ರೀ ಶನೇಶ್ವರ ಕಲಾಸಂಘ ಬ್ಯಾರಮಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಯನ ಕಲೋತ್ಸವ ಹಾಗೂ ಶ್ರೀ ಶನಿಪ್ರಭಾವ ನಾಟಕದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಮತ್ತು ನಾಟಕಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ದುಃಖ, ದುಮ್ಮಾನ, ಸಂಕಟ, ವೇದನೆ ದೂರಮಾಡಿ ಮನಸ್ಸನ್ನು ಹಗುರಗೊಳಿಸುವ ಕೆಲಸ ಮಾಡುತ್ತವೆ. ಚಲನಚಿತ್ರ, ದೂರದರ್ಶನ ಹಾಗೂ ಮೊಬೈಲ್ ಹಾವಳಿಯಿಂದ ರಂಗಭೂಮಿಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಕರೋನ ನಂತರ ನಾಟಕಗಳ ಪ್ರದರ್ಶನ ಇಲ್ಲದೆ ಕಲಾವಿದರ ಬದುಕು ಚಿಂತಾಜನಕವಾಗಿದೆ. ಒಂದು ತುತ್ತು ಊಟಕ್ಕೂ ಚಿಂತೆ ಮಾಡುವ ಪರಿಸ್ಥಿತಿ ಕಲಾವಿದರು ಎದುರಿಸುತ್ತಿದ್ದಾರೆ. ಸಂಗೀತ ಮತ್ತು ನಾಟಕ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೊಸ ಹೊಸ ಯೋಜನೆ ರೂಪಿಸಬೇಕು ಎಂದರು.ಯುವ ಮುಖಂಡ ರಾಮದಾಸಪ್ಪ ಮಾತನಾಡಿ, ಹಳ್ಳಿಯ ಭಾಗದಲ್ಲಿ ಹಬ್ಬ ಹರಿದಿನ ಜಾತ್ರೆ ಸಂದರ್ಭಗಳಲ್ಲಿ ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಆಡುವ ಮೂಲಕ ರಂಗಭೂಮಿ ಬೆಳವಣಿಗೆಗೆ ಹಳ್ಳಿಯ ಜನರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು.
ಎರಡು ದಿನಗಳ ಕಾಲ ನಡೆದ ಶ್ರೀ ಶನಿಪ್ರಭಾವ ನಾಟಕ ತರಬೇತಿಯನ್ನು ಕಲಾವಿದ ಓ.ಮೂರ್ತಿ ನಡೆಸಿಕೊಟ್ಟರು.ಈ ವೇಳೆ ರಾಮಚಂದ್ರಪ್ಪ, ಹಾರ್ಮೋನಿಯಂ ವಾದಕ ಬಸವರಾಜಪ್ಪ, ಗಂಗಾನಾಯ್ಕ, ಶಿವನಾಯಕ, ಪ್ರಕಾಶ್, ಗಣೇಶ್ ನಾಯ್ಕ್, ರಾಜಣ್ಣ, ಕರಿಯಪ್ಪ, ಜಗದೀಶ ಶೆಟ್ಟರು, ಪರಮಶಿವಪ್ಪ, ಚಂಬಣ್ಣ, ಗಾಂಧಾಳಪ್ಪ ಮುಂತಾದವರು ಉಪಸ್ಥಿತರಿದ್ದರು.