ಶಿಕ್ಷಣದಲ್ಲಿ ಉದಾತ್ತ ಚಿಂತನೆಗಳು ಮರೆಯಾಗುತ್ತಿವೆ: ಪ್ರೊ.ಎನ್.ಟಿ. ಪ್ರಭಾಕರ್

| Published : May 15 2024, 01:33 AM IST

ಶಿಕ್ಷಣದಲ್ಲಿ ಉದಾತ್ತ ಚಿಂತನೆಗಳು ಮರೆಯಾಗುತ್ತಿವೆ: ಪ್ರೊ.ಎನ್.ಟಿ. ಪ್ರಭಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಪಠ್ಯಕ್ರಮ ಮಾಹಿತಿಗಳಿಂದ ಕೂಡಿರುತ್ತವೆಯೇ ಹೊರತು ಉದಾತ್ತ ಹಾಗೂ ಮೌಲ್ಯಯುತ ಚಿಂತನೆಗಳು ಗೌಣವಾಗಿರುತ್ತವೆ. ಹೀಗಾಗಿ, ಮಾನವೀಯ ಮೌಲ್ಯಗಳ ಸಮಾಜ ನಿರ್ಮಾಣ ಆಗುತ್ತಿಲ್ಲ. ಮೌಲ್ಯಗಳು ಹಿನ್ನೆಲೆಗೆ ಸರಿಯುತ್ತಿರುವುದರಿಂದ ಶಿಕ್ಷಕರು, ಉಪನ್ಯಾಸಕರು, ಪೋಷಕರು ಅಸಹಾಯಕರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣದಲ್ಲಿ ಉದಾತ್ತ ಚಿಂತನೆಗಳು ಮರೆಯಾಗುತ್ತಿವೆ. ಮಾಹಿತಿಗೆ ಹೆಚ್ಚು ಆದ್ಯತೆ ನೀಡುವುದರಿಂದ ಮಾಹಿತಿಗಾಗಿಯೇ ಶಿಕ್ಷಣ ಎಂಬಂತಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರೊ.ಎನ್.ಟಿ. ಪ್ರಭಾಕರ್ ವಿಷಾದಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆ ಹಾಗೂ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗವು ಮಂಗಳವಾರ ಆಯೋಜಿಸಿದ್ದ ಸಮಾಜ ಕಲ್ಯಾಣದ ಆಡಳಿತ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪಠ್ಯಕ್ರಮ ಮಾಹಿತಿಗಳಿಂದ ಕೂಡಿರುತ್ತವೆಯೇ ಹೊರತು ಉದಾತ್ತ ಹಾಗೂ ಮೌಲ್ಯಯುತ ಚಿಂತನೆಗಳು ಗೌಣವಾಗಿರುತ್ತವೆ. ಹೀಗಾಗಿ, ಮಾನವೀಯ ಮೌಲ್ಯಗಳ ಸಮಾಜ ನಿರ್ಮಾಣ ಆಗುತ್ತಿಲ್ಲ. ಮೌಲ್ಯಗಳು ಹಿನ್ನೆಲೆಗೆ ಸರಿಯುತ್ತಿರುವುದರಿಂದ ಶಿಕ್ಷಕರು, ಉಪನ್ಯಾಸಕರು, ಪೋಷಕರು ಅಸಹಾಯಕರಾಗಿದ್ದಾರೆ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಉದಾತ್ತ ಚಿಂತನೆಗಳೂ ಇವೆ. ಧರ್ಮ ಎಂದರೆ ಕರ್ತವ್ಯವಾಗಿದ್ದು, ಅದನ್ನು ಪರಿಪಾಲಿಸಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಧರ್ಮದ ಬಗ್ಗೆ ತಪ್ಪು ತಿಳವಳಿಕೆಗಳಿವೆ. ಕೇವಲ ಆಚಾರ– ವಿಚಾರ, ತೀರ್ಥ, ಪೂಜೆಯಷ್ಟೇ ಧರ್ಮವಲ್ಲ. ಭಾರತೀಯ ಪ್ರಜ್ಞೆಯನ್ನು ಎತ್ತಿ ಹಿಡಿಯುವುದೇ ಧರ್ಮವಾಗಿದೆ ಎಂದು ಅವರು ಹೇಳಿದರು.

ಜನರಿಗೆ ತೆರಿಗೆ ಹೊರೆಯಾಗಿ ಪರಿಣಮಿಸಿದೆ. ಆಡಳಿತ ವ್ಯವಸ್ಥೆಯಲ್ಲಿ ತೆರಿಗೆ ವ್ಯವಸ್ಥೆ ಜನಪರವಾಗಿರಬೇಕು. ಹೂ ರಸವನ್ನು ದುಂಬಿ ಹೀರಿದಂತೆ ಜನರಿಗೆ ಹೊರೆಯಾಗದಂತೆ ತೆರಿಗೆ ಸ್ವೀಕರಿಸಬೇಕು. ಅದು 6ನೇ ಒಂದು ಭಾಗದಷ್ಟಿರಬೇಕು. ಆದರೆ, ಬುದ್ಧಿವಂತಿಕೆ, ಜಾಣತನದಿಂದ ತೆರಿಗೆ ತೆಗೆದುಕೊಳ್ಳಲಾಗುತ್ತಿದೆ. ಜನರ ಶೋಷಣೆ ನಡೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಎಚ್.ಎಸ್. ಅಶೋಕಾನಂದ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಹೊಂಬಾಳ್, ಗ್ರಾಸ್ ರೂಟ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಸವರಾಜ ಆರ್. ಶ್ರೇಷ್ಠ, ನಿರ್ದೇಶಕಿ ರೇಖಾ ಷಣ್ಮುಖ ಮೊದಲಾದವರು ಇದ್ದರು.