ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ-ಭಟ್ಟರಹಳ್ಳಿ ಕೆರೆಯಲ್ಲಿ ಬಳಸಿದ ಸಿರಂಜ್‍ಗಳು, ಔಷಧ ಬಾಟಲಿಗಳು ಹಾಗೂ ಇತರೆ ವೈದ್ಯಕೀಯ ತ್ಯಾಜ್ಯ ಸುರಿದಿರುವ ಘಟನೆ ಬೆಳಕಿಗೆ ಬಂದಿದೆ
ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ-ಭಟ್ಟರಹಳ್ಳಿ ಕೆರೆಯಲ್ಲಿ ಬಳಸಿದ ಸಿರಂಜ್‍ಗಳು, ಔಷಧ ಬಾಟಲಿಗಳು ಹಾಗೂ ಇತರೆ ವೈದ್ಯಕೀಯ ತ್ಯಾಜ್ಯ ಸುರಿದಿರುವ ಘಟನೆ ಬೆಳಕಿಗೆ ಬಂದಿದೆ.
ಮುಕ್ಕಾಲು ಭಾಗ ನೀರು ತುಂಬಿರುವ ಕೆರೆ ಸುತ್ತಮುತ್ತಲಿನ ಐದಾರು ಗ್ರಾಮಗಳಿಗೆ ಪ್ರಮುಖ ಜಲಮೂಲವಾಗಿದೆ. ಆದರೆ ಕ್ಲಿನಿಕ್ ಗಳು ಹಾಗೂ ಪ್ರಯೋಗಾಲಯಗಳಲ್ಲಿ ಬಳಸಿದ ವೈದ್ಯಕೀಯ ತ್ಯಾಜ್ಯವನ್ನು ರಾತ್ರಿ ವೇಳೆ ಮೂಟೆಗಟ್ಟಲೆ ತಂದು ಕೆರೆಯ ಸುತ್ತಮುತ್ತ ಎಸೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಕ್ತದ ಕಲೆಗಳಿರುವ ತ್ಯಾಜ್ಯವನ್ನು ನಾಯಿಗಳು ಎಳೆದಾಡುತ್ತಿರುವ ಪರಿಣಾಮ ಸಿರಂಜ್‍ಗಳು ಕೆರೆಯ ಸುತ್ತ ಹರಡಿಕೊಂಡಿವೆ.ಗ್ರಾಮದಿಂದ ಕೆರೆಗೆ ನೀರು ಹರಿಯುವ ಸೇತುವೆ ಕೆಳಭಾಗದಲ್ಲಿ ಸೂಜಿ ಸಮೇತ ಬಳಸಿರುವ ಸಿರಂಜ್‍ಗಳನ್ನು ಸುರಿಯಲಾಗಿದೆ. ಮಳೆಯ ನೀರಿನೊಂದಿಗೆ ಇವು ಕೆರೆಯೊಳಗೆ ಸೇರಿ ನೀರು ಕಲುಷಿತವಾಗುವ ಭೀತಿ ಎದುರಾಗಿದೆ. ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಬಳಸಿದ ಹತ್ತಿ, ಔಷಧ ಸಾಮಗ್ರಿ ಸೇರಿದಂತೆ ವೈದ್ಯಕೀಯ ತ್ಯಾಜ್ಯವನ್ನು ಕೆರೆಗೆ ಎಸೆಯಲಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.
ಕೆರೆಯಲ್ಲಿ ನೀರು ಕುಡಿಯುವ ಜಾನುವಾರುಗಳ ಬಾಯಿಗೆ ಸೂಜಿಯಿರುವ ಸಿರಂಜ್‍ಗಳು ಸಿಕ್ಕಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಮೀನಿನ ಬಾಯಿಯಲ್ಲಿ ಸಿರಂಜ್ ಸೂಜಿ ಸಿಲುಕಿ ಮೀನುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಟಿಎಚ್‍ಒ ಬೇಜವಾಬ್ದಾರಿ: ಕೆರೆಯಲ್ಲಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಅಪಾಯಕಾರಿ ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿರುವ ಕುರಿತು ಮೊದಲೇ ಮಾಹಿತಿ ಇದ್ದರೂ ಸಹ ಟಿಎಚ್‍ಒ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಜಲಮೂಲ ಕಲುಷಿತಗೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ತಾಪಂ ಇಒ ಬಿಂದು ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟೆಲ್ಲಾ ದೊಡ್ಡ ಮಟ್ಟದ ಅವಾಂತರ ಸೃಷ್ಟಿಯಾಗಿದ್ದರೂ, ಟಿಎಚ್‍ಒ ಸ್ಥಳಕ್ಕೆ ಭೇಟಿ ನೀಡದೆ ಬೇಜವಾಬ್ದಾರಿತನ ಹಾಗೂ ಉಡಾಫೆಯಿಂದ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್...ಕೆರೆಗೆ ಆಸ್ಪತ್ರೆ ಹಾಗೂ ಕ್ಲಿನಿಕ್‍ನಲ್ಲಿ ಬಳಸಲಾದ ತ್ಯಾಜ್ಯ ಎಸೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಟಿಎಚ್‍ಒಗೆ ಕಟ್ಟುನಿಟ್ಟಿನ ಮಾಹಿತಿ ನೀಡುತ್ತೇನೆ. ಜಲಮೂಲ ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.
-ಡಾ.ಲಕ್ಕಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿಕೋಟ್..........ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದಿರುವುದು ಗಂಭೀರ ಅಪರಾಧ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತಪ್ಪಿತಸ್ಥ ಆಸ್ಪತ್ರೆ, ಕ್ಲಿನಿಕ್ ಅಥವಾ ಪ್ರಯೋಗಾಲಯವನ್ನು ಪತ್ತೆಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.
-ಡಾ. ಬಿಂದು ಇಒ, ತಾಲೂಕು ಪಂಚಾಯಿತಿಪೋಟೋ 2 :
ಯಂಟಗಾನಹಳ್ಳಿ ಕೆರೆ ಸಮೀಪ ಸುರಿದಿರುವ ವೈದ್ಯಕೀಯ ತ್ಯಾಜ್ಯ.ಪೋಟೋ 3 :
ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ನೆಲಮಂಗಲ ತಾಲೂಕು ಪಂಚಾಯತಿ ಇಒ ಬೃಂದಾ.